ಕೇರಳದಲ್ಲಿ ವಕ್ಫ್‌ ವಿರುದ್ದದ ಪ್ರತಿಭಟನೆಯಲ್ಲಿ ಹಮಾಸ್ ನಾಯಕ, ಇಸ್ಲಾಮಿಕ್ ವ್ಯಕ್ತಿಗಳ ಫೋಟೋ ಪ್ರದರ್ಶನ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಕ್ಫ್‌ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಕೇರಳದಲ್ಲಿ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಪ್ರತಿಭಟನಾಕಾರರು ಉಗ್ರರು ಮತ್ತು ಉಗ್ರ ಸಂಘಟನೆ ಜೊತೆ ನಂಟು ಹೊಂದಿರುವವರ ಫೊಟೋ ಪ್ರದರ್ಶಿಸಿರುವ ಘಟನೆ ನಡೆದಿದೆ.

ಕೇರಳದ ಕೋಝಿಕ್ಕೋಡ್‌ನ ಕರಿಪುರ ವಿಮಾನ ನಿಲ್ದಾಣದ ಬಳಿ ಪ್ರತಿಭಟನಾಕಾರರು ಮುಸ್ಲಿಂ ಬ್ರದರ್‌ಹುಡ್‌ನ ಪ್ರಮುಖ ಸಿದ್ಧಾಂತವಾದಿ ಸಯ್ಯದ್ ಕುತುಬ್, ಹತ್ಯೆಗೀಡಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್, ಜೈಲಿನಲ್ಲಿರುವ ಎಡಪಂಥೀಯ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಮತ್ತು ಹಲವಾರು ದೇಶಗಳು ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಲಾದ ಮುಸ್ಲಿಂ ಬ್ರದರ್‌ಹುಡ್‌ನ ಸಂಸ್ಥಾಪಕ ಶೇಖ್ ಹಸನ್ ಅಲ್-ಬನ್ನಾ (1906–1949)ಫೊಟೋಗಳನ್ನು ಹಿಡಿದು ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ.

ಈ ಪ್ರತಿಭಟನೆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಬಿಜೆಪಿ ಸೇರಿದಂತೆ ಅನೇಕ ಬಲಪಂಥೀಯ ನಾಯಕರು ಖಂಡಿಸಿದ್ದಾರೆ.

ಕೇರಳ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ. ಸುರೇಂದ್ರನ್ ಪ್ರತಿಕ್ರಿಯಿಸಿದ್ದು, ‘ಪ್ರತಿಭಟನಾಕಾರರು ಹಮಾಸ್ ಭಯೋತ್ಪಾದಕರು ಮತ್ತು ಜಾಗತಿಕ ಜಿಹಾದ್‌ನ ಸೈದ್ಧಾಂತಿಕ ಪಿತಾಮಹ ಸಯ್ಯದ್ ಕುತುಬ್ ಅವರ ಫೋಟೋಗಳನ್ನು ಏಕೆ ಪ್ರದರ್ಶಿಸುತ್ತಿದ್ದರು? ಮುಖ್ಯಮಂತ್ರಿ ಇದಕ್ಕೆ ಏಕೆ ಅವಕಾಶ ನೀಡುತ್ತಿದ್ದಾರೆ? ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದಿದ್ದಾರೆ.

ಇತ್ತ ಕೇರಳ ಪೊಲೀಸರು ಸುಮಾರು 3,000 ಇತರ ಅಪರಿಚಿತ ಪ್ರತಿಭಟನಾಕಾರರ ವಿರುದ್ಧ ಕಾನೂನುಬಾಹಿರ ಸಭೆ ಮತ್ತು ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ. ಆದರೆ ಉಗ್ರರ ಫೊಟೋ ಪ್ರದರ್ಶಿಸಿದ ವಿಚಾರಕ್ಕೆ ಯಾವುದೇ ಪ್ರಕರಣ ದಾಖಲಾಗಿಲ್ಲ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!