ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ತಿರುಮಲ ಶ್ರೀವಾರಿ ದೇವಾಲಯದ ಆವರಣದಲ್ಲಿ ನವವಿವಾಹಿತ ಜೋಡಿಯೊಬ್ಬರು ಫೋಟೋಶೂಟ್ ನಡೆಸಿದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ. ದೇಗುಲದ ಪವಿತ್ರ ವಾತಾವರಣದಲ್ಲಿ ಅಸಭ್ಯ ವರ್ತನೆ ತೋರಿದಂತೆ ಕಂಡುಬಂದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಬುಧವಾರ ಬೆಳಗ್ಗೆ ಮದುವೆಯಾದ ಬಳಿಕ ತಮಿಳುನಾಡು ಮೂಲದ ದಂಪತಿ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದರು. ನಂತರ ದೇಗುಲ ಆವರಣದ ಗೊಲ್ಲಮಂಟಪದ ಸಮೀಪ ವಿಶೇಷ ಬೆಳಕಿನೊಂದಿಗೆ ಫೋಟೋಶೂಟ್ ನಡೆಸಿದ್ದು, ಈ ವೇಳೆ ಪರಸ್ಪರ ಚುಂಬಿಸಿಕೊಂಡ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಭಕ್ತರು ಸಂಚರಿಸುವ ಮಾರ್ಗದಲ್ಲೇ ಈ ದೃಶ್ಯಗಳು ಕಂಡುಬಂದಿರುವುದು ಅಸಮಾಧಾನಕ್ಕೆ ಕಾರಣವಾಯಿತು.
ಇದನ್ನೂ ಓದಿ:
ವಿವಾದ ಹೆಚ್ಚಾದ ಬೆನ್ನಲ್ಲೇ ತಿರುಮಲ ತಿರುಪತಿ ದೇವಸ್ಥಾನಂ (TTD) ಸ್ಪಷ್ಟನೆ ನೀಡಿದ್ದು, ದೇಗುಲ ಆವರಣದಲ್ಲಿ ಫೋಟೋ, ವೀಡಿಯೊ ಹಾಗೂ ರೀಲ್ಸ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮತ್ತೆ ಎಚ್ಚರಿಕೆ ನೀಡಿದೆ. ಇಂತಹ ನಿಯಮ ಉಲ್ಲಂಘನೆಗಳು ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಇದೀಗ ವಿವಾದದ ಕೇಂದ್ರವಾಗಿರುವ ದಂಪತಿ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆಯಾಚಿಸಿದ್ದು, ನಿಯಮಗಳ ಬಗ್ಗೆ ಅರಿವಿರಲಿಲ್ಲ ಎಂದು ಹೇಳಿದ್ದಾರೆ. ವೈರಲ್ ಆದ ಎಲ್ಲಾ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿರುವುದಾಗಿ ಸ್ಪಷ್ಟಪಡಿಸಿ, ಇಂತಹ ತಪ್ಪು ಮತ್ತೆ ನಡೆಯುವುದಿಲ್ಲ ಎಂದು ಭರವಸೆ ನೀಡಿದ್ದಾರೆ.



