ನರಗುಂದದ ವಿಶಿಷ್ಟಚೇತನ ವ್ಯಕ್ತಿಯ ಶ್ರಮಗಾಥೆ: ಎಲ್ಲ ಸರಿಯಿದ್ದೂ ಸೋಮಾರಿಗಳಾಗುವವರಿಗೆ ತೋರಿಸಬೇಕಾದ ಉದಾಹರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಉತ್ತಮ ಉದಾಹರಣೆ. ಇಲ್ಲೊಂದಿಬ್ಬರು ವಿಶಿಷ್ಟಚೇತನ ವ್ಯಕ್ತಿಗಳು ನರೇಗಾದಲ್ಲಿ ಸಾಮಾನ್ಯ ವ್ಯಕ್ತಿಗಳಂತೆ ಕೂಲಿ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ತಾಲೂಕಿನ ಚಿಕ್ಕನರಗುಂದ ಗ್ರಾಪಂ ವ್ಯಾಪ್ತಿಯ ವಿಶಿಷ್ಟಚೇತನ ಸಿದ್ಧಪ್ಪ ಚೆನ್ನಶೆಟ್ಟಿ ಹಾಗೂ ಹನುಮಂತಪ್ಪ ಕುಲಮಂಚಿ ಅವರೇ ನರೇಗಾದಲ್ಲಿ ಕೂಲಿ ಕೆಲಸ ಮಾಡಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನರೇಗಾದ ಕೂಲಿ ಕೆಲಸಕ್ಕಾಗಿ ಗ್ರಾಪಂ ಮೆಟ್ಟಿಲೇರಿದ್ದ ಈ ವಿಶಿಷ್ಟಚೇತನರಿಗೆ ಅಂದು ಇವರಿಗೇನು ಕೆಲಸ ಕೊಡ್ತಿರೀ ಅಂತ ಇನ್ನಿತರ ಕೂಲಿಕಾರರು ಗಹಗಹಿಸಿ ನಕ್ಕವರ ಬಾಯಿ ಮೇಲೆ ಬೆರಳಿಡುವ ಹಾಗೇ ಇಂದು ಅದೇ ವಿಶಿಷ್ಟಚೇತನ ವ್ಯಕ್ತಿಗಳು ನರೇಗಾ ಕಾಮಗಾರಿ ಸ್ಥಳದಲ್ಲಿ ಸಾಮಾನ್ಯ ಕೂಲಿಕಾರರಿಗೆ ಬೆರಗು ಮೂಡಿಸುವಂತೆ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ.

ನರೇಗಾ ಸಮುದಾಯ ಕಾಮಗಾರಿ ಆರಂಭಿಸುವ ಮುನ್ನ ಗ್ರಾಪಂ ಕಚೇರಿಯಲ್ಲಿ ಕಾಯಕ ಬಂಧುಗಳ ಸಭೆ ನಡೆಸಲಾಗಿತ್ತು. ಆ ಸಭೆಗೆ ಬಂದಿದ್ದ ವಿಶಿಷ್ಟಚೇತನ ಸಿದ್ದಪ್ಪ, ನಾವು ಕೆಲಸ ಮಾಡುತ್ತೇವೆ. ನಮಗೂ ಕೆಲಸ ಕೊಡಿ ಎಂದು ಗ್ರಾಮ ಪಂಚಾಯತಿ ಸಿಬ್ಬಂದಿಗೆ ಬೇಡಿಕೆ ಇಟ್ಟಿದ್ದರು. ನರೇಗಾದಲ್ಲಿ ವಿಶಿಷ್ಟಚೇತನರಿಗೂ ಕೆಲಸ ಮಾಡಲು ಅವಕಾಶವಿದೆ ಎಂದು ಗ್ರಾಪಂ ಸಿಬ್ಬಂದಿ ಮತ್ತು ನರೇಗಾ ಸಿಬ್ಬಂದಿ ತಿಳಿ ಹೇಳಿದ್ದರು. ಆ ಸಂದರ್ಭದಲ್ಲಿ ಸಭೆಯಲ್ಲಿದ್ದ ಕಾಯಕ ಬಂಧುಗಳು ಇವರಿಗೇನು ಕೆಲಸ ಕೊಡೋದು ಎಂದು ನಕ್ಕಿದ್ದರು.

ಗ್ರಾಪಂ ಸಿಬ್ಬಂದಿ ಭರವಸೆಯಂತೆ ಕಾಮಗಾರಿ ಸ್ಥಳಕ್ಕೆ ವಿಶಿಷ್ಟಚೇತನರಾದ ಸಿದ್ದಪ್ಪ ಚೆನ್ನಶೆಟ್ಟಿ ಹಾಗೂ ಹನುಮಂತಪ್ಪ ಕುಲವಂಚಿ ಇವರಿಬ್ಬರು ಕೆಲಸಕ್ಕೆ ಬಂದರು. ಕೆಲಸಕ್ಕೆ ಬಂದ ಇವರಿಬ್ಬರಿಗೂ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಕುಡಿಯುವ ನೀರು ಕೊಡುವ ಜವಾಬ್ದಾರಿ ಕೊಡಲಾಯಿತು. ಈ ಕೆಲಸವನ್ನು ಬಹಳ ನಿಷ್ಠೆಯಿಂದ ಮಾಡುತ್ತಿರುವ ಇವರಿಬ್ಬರೂ ಕೂಲಿಕಾರರು ಇರುವ ಸ್ಥಳಕ್ಕೆ ತೆರಳಿ ಕುಡಿಯುವ ನೀರಿನ ಬಾಟಲಿ ಕೊಟ್ಟು ಕೂಲಿಕಾರರ ನೀರಿನ ದಾಹ ತಣಿಸುತ್ತಿದ್ದಾರೆ.

ವಿಶಿಷ್ಟಚೇತನರ ಈ ಕೆಲಸವನ್ನು ಮೆಚ್ಚಿಕೊಂಡಿರುವ ಗ್ರಾಪಂ ಸಿಬ್ಬಂದಿ ಅವರ ಕೆಲಸಕ್ಕೆ ಸಹಾಯ ಒದಗಿಸುತ್ತಿದ್ದಾರೆ. ಸಮಾಜದಲ್ಲಿನ ವಿವಿಧ ರೀತಿಯ ಜನರಿಗೆ ಈ ರೀತಿಯಾಗಿ ಕೆಲಸ ಕೊಟ್ಟು ಅವರನ್ನು ಜೊತೆಗೆ ಕರೆದುಕೊಂಡು ಹೋಗಬಹುದೆಂಬ ವಿಷಯ ಕಾಯಕ ಬಂಧುಗಳಿಗೆ ಸಂತಸ ತಂದಿದೆ.

ನಮಗ್ಯಾರೂ ಕೆಲಸ ಕೊಡಲ್ಲ ಎಂಬ ಮನಸ್ಥಿಯಲ್ಲಿದ್ದಾಗ ನರೇಗಾ ಯೋಜನೆಯಡಿ ಕೆಲಸ ಕೊಟ್ಟಿರುವುದು ಭರವಸೆ ಜೀವನ ಸಾಗಿಸಲು ಮತ್ತಷ್ಟು ಹುಮ್ಮಸ್ಸು ತರಿಸಿದೆ. ಸರಕಾರ ಕೊಡುವ ಮಾಶಾಸನ ನಮ್ಮ ಜೀವನಕ್ಕೆ ಸಾಕಾಗುವುದಿಲ್ಲ. ಹೊಟ್ಟೆಗಾದರೆ ಬಟ್ಟೆಗಿಲ್ಲ, ಬಟ್ಟೆಗಾದರೆ ಹೊಟ್ಟೆಗಿಲ್ಲ ಎಂಬ ನೋವಿನಲ್ಲಿದ್ದ ನಮಗೆ ನರೇಗಾ ಕೂಲಿ ಕೆಲಸ ಆಸರೆ ಆಗಿದೆ. ಉಳಿದೆಲ್ಲ ಕೂಲಿಕಾರರು ಹಾಗೂ ಪಂಚಾಯತಿ ಸಿಬ್ಬಂದಿ ಸಹಕಾರ ಕೊಡುತ್ತಿದ್ದಾರೆ ಎಂದು ವಿಶಿಷ್ಟಚೇತನ ಸಿದ್ಧಪ್ಪ ಚೆನ್ನಶೆಟ್ಟಿ ಹೇಳಿದ್ದಾರೆ.

ವಿಶಿಷ್ಟಚೇತನ ವ್ಯಕ್ತಿಗಳು ಸೇರಿದಂತೆ ನಾವೆಲ್ಲರೂ ಒಂದು ಸಮಾಜವಾಗಿದ್ದೇವೆ. ನರೇಗಾದಲ್ಲಿ ಕೂಲಿ ಮಾಡುವ ಜನರಿಗೆ ಕುಡಿಯುವ ನೀರು ಮತ್ತು ಇನ್ನಿತರ ಸಾಮಗ್ರಿಗಳನ್ನು ತಂದು ಕೊಡುವುದು ಒಂದು ಕೆಲಸವಾಗಿದೆ. ಇಂಥವರನ್ನು ಗುರುತಿಸಿ ಕೆಲಸ ಕೊಟ್ಟು ಸಮಾಜದ ಮುಂಚೂಣಿಗೆ ತರಲು ನರೇಗಾ ಕೆಲಸ ಆಧಾರವಾಗಿದೆ. ವಿಶಿಷ್ಟಚೇತನರು ಕೆಲಸ ಮಾಡುತ್ತಿರುವುದು ಸಮಾಧಾನ ತಂದಿದೆ ಎಂದು ಚಿಕ್ಕನರಗುಂದ ಗ್ರಾಪಂ ಸದಸ್ಯ ಮುತ್ತು ರಾಯರಡ್ಡಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!