ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಿಕಪ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಸವಾರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ- ಮೂಡಬಿದಿರೆ ರಸ್ತೆಯ ಸೋರ್ನಾಡು ಎಂಬಲ್ಲಿ ಮಂಗಳವಾರ ಸಂಜೆ ಸಂಭವಿಸಿದ್ದು,ಘಟನೆಯ ಬಳಿಕ ಚಾಲಕ ವಾಹನ ಸಹಿತವಾಗಿ ಪರಾರಿಗೆ ಯತ್ನಿಸಿದಾಗ ಸ್ಥಳೀಯರು ಅತನನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದಿದ್ದಾರೆ.
ಮೃತ ಬೈಕ್ ಸವಾರರನ್ನು ಲೊರೆಟ್ಟೋ ಸಮೀಪದ ಕುಪ್ರಾಡಿ ನಿವಾಸಿ ನಿತೇಶ್ (30) ಹಾಗೂ ಬಿ.ಸಿ.ರೋಡಿನ ಕಾಮಾಜೆ ನಿವಾಸಿ ಶಶಿಧರ್ ( 26) ಎಂದು ಗುರುತಿಸಲಾಗಿದೆ.
ಬೈಕ್ ಸವಾರರ ಪೈಕಿ ನಿತೇಶ್ ಬೈಕ್ ಮೆಕಾನಿಕ್ ಆಗಿದ್ದು, ಶಶಿಧರ್ ವೃತ್ತಿಯಲ್ಲಿ ಚಾಲಕನಾಗಿದ್ದಾರೆ.
ಇವರಿಬ್ಬರು ಸಂಜೆಯ ವೇಳೆ ಸಿದ್ದಕಟ್ಟೆಯಿಂದ ಬಿ.ಸಿ.ರೋಡಿನತ್ತ ಬರುತ್ತಿದ್ದ ವೇಳೆ ಎದುರು ದಿಕ್ಕಿ ನಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಧಾವಿಸಿ ಬಂದ ಟಿಪ್ಪರ್ ಲಾರಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂ ಗೊಂಡಿದ್ದು, ಬೈಕಿನಲ್ಲಿದ್ದ ಸವಾರರಿಬ್ಬರು ಗಂಭೀರ ಸ್ವರೂಪದ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಡಿದ್ದಾರೆ ಎಂದು ತಿಳಿದು ಬಂದಿದೆ.