ಪಿಲಿಕುಳ ಜೈವಿಕ ಉದ್ಯಾನವನ: ಕಾಳಿಂಗ ಸರ್ಪಗಳಿಗೆ ಮೈಕ್ರೋ ಚಿಪ್!

ಹೊಸದಿಗಂತ ವರದಿ,ಮಂಗಳೂರು:

ನಗರ ಹೊರವಲಯದ ಪಿಲಿಕುಳ ಮೃಗಾಲಯದಲ್ಲಿ ಕಾಳಿಂಗ ಸರ್ಪಗಳಿಗೆ ಮೈಕ್ರೋ ಚಿಪ್ (ಸೂಕ್ಷ್ಮ ಬಿಲ್ಲೆ ) ಅಳವಡಿಕೆ ಮಾಡಲಾಗುತ್ತಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

ಉರಗಗಳು ಸಾಮಾನ್ಯವಾಗಿ ಒಂದೇ ತರವಾಗಿರುವುದರಿಂದ ಅವುಗಳನ್ನು ಮೇಲ್ನೋಟಕ್ಕೆ ಪ್ರತ್ಯೇಕವಾಗಿ ಗುರುತಿಸಲು ಕಷ್ಟವಾಗುತ್ತದೆ. ಪಿಲಿಕುಳವು ಕಾಳಿಂಗ ಸರ್ಪಗಳ ಸಂತನಾಭಿವೃದ್ಧಿ ಮತ್ತು ಸಂರಕ್ಷಣಾ ಕೇಂದ್ರವಾಗಿರುವುದರಿಂದ ಕಾಳಿಂಗ ಸರ್ಪಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮೈಕ್ರೋಚಿಪ್ ಅಳವಡಿಸಲಾಗುತ್ತಿದೆ. ಇದರಿಂದ ಸಂತನಾಭಿವೃದ್ಧಿಯ ಸಮಯದಲ್ಲಿ ಅವುಗಳು ಅಂತರ್ ಸಂಬಂಧ ಮತ್ತು ಉತ್ತಮ ಪೀಳಿಗೆಯನ್ನು ಹೊಂದುವಂತೆ ಮಾಡಲು ಅನುಕೂಲವಾಗುತ್ತದೆ.

ಉರಗಗಳನ್ನು ಬಾಹ್ಯ ನೋಟದಿಂದ ಗಂಡು ಹೆಣ್ಣು ಎಂದು ಗುರುತಿಸಲು ಕಷ್ಟವಾಗುತ್ತದೆ. ವೈಜ್ಞಾನಿಕವಾಗಿ ಅವುಗಳ ಲಿಂಗ ಬೇಧವನ್ನು ಪತ್ತೆ ಹಚ್ಚಲು ಶೋಧ ಉಪಕರಣಗಳನ್ನು ಉಪಯೋಗಿಸಲಾಗುತ್ತದೆ. ಅವುಗಳ ತೂಕ, ಉದ್ದ ಅಳತೆಗಳನ್ನು ನಿಖರವಾಗಿ ದಾಖಲಿಸಲಾಗುತ್ತದೆ.
ಪಿಲಿಕುಳ ಮೃಗಾಲಯದ ದೊಡ್ಡ ಬೆಕ್ಕುಗಳ ಜಾತಿಗೆ ಸೇರಿದ ಹುಲಿ, ಸಿಂಹ, ಚಿರತೆಗಳಿಗೆ ಮೈಕ್ರೋ ಚಿಪ್ ಅಳವಡಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ.

ಅಪರೂಪದ ಜಾತಿಯ ಪ್ರಾಣಿಗಳದ ಹೈನಾ, ತೋಳ, ಕಾಡು ನಾಯಿ, ಕರಡಿಗಳು ಅಲ್ಲದೆ ‘ನೈಲ್’, ‘ಘರಿಯಾಲ್’ ಲಿಂಗ ಪರೀಕ್ಷೆ ಮತ್ತು ಗುರುತಿಸುವ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ಮೈಕ್ರೋ ಚಿಪ್‌ಗಳನ್ನು ಪ್ರಾಣಿಗಳ ಚರ್ಮದ ಒಳಗೆ ಅಳವಡಿಸಲಾಗುತ್ತದೆ. ಚಿಪ್‌ಗಳಲ್ಲಿ ನಮೂದಿಸಲಾದ ಕ್ರಮ ಸಂಖ್ಯೆಗಳನ್ನು ಬಾಹ್ಯವಾಗಿ ಸೆನ್ಸಿಂಗ್ ರೀಡರ್‌ನಿಂದ ಪಡೆಯಬಹುದಾಗಿದೆ.

ಪಕ್ಷಿಗಳ ಲಿಂಗ ಗುರುತಿಸುವಿಕೆಗೆ ಡಿಎನ್‌ಎ ಪರೀಕ್ಷೆ ಮಾಡಲಾಗುವುದು. ಅಮದು ಮಾಡಿದ ಮೈಕ್ರೊಚಿಪ್ ಮತ್ತು ಉಪಕರಣಗಳನ್ನು ಉಪಯೋಗಿಸಲಾಗಿದೆ. ಮೈಕ್ರೊಚಿಪ್‌ಗಳು ಪ್ರಾಣಿಗಳಿಗೆ ಯಾವುದೇ ಅಡ್ಡ ಪರಿಣಾಮವನ್ನು ಬಿರುವುದಿಲ್ಲ, ಅದನ್ನು ಬದಲಿಸಬೇಕಾದ ಅವಶ್ಯಕತೆ ಕೂಡ ಇಲ್ಲ ಹಾಗೂ ಪ್ರಾಣಿಗಳ ಜೀವವಾಯವರೆಗೆ ಇದು ದೇಹದಲ್ಲಿ ಇರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!