ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯೊಬ್ಬರ ಆಕ್ಷೇಪಾರ್ಹ ವಿಡಿಯೋ ರೆಕಾರ್ಡ್ ಮಾಡಿದ್ದಕ್ಕಾಗಿ ದೆಹಲಿಯಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಯ ಪೈಲಟ್ ಒಬ್ಬನನ್ನು ಬಂಧಿಸಲಾಗಿದೆ. ಆತನಿಂದ ಲೈಟರ್ ಆಕಾರದ ಸಣ್ಣ, ಗುಪ್ತ ಸ್ಪೈ ಕ್ಯಾಮೆರಾವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ಉತ್ತರ ಪ್ರದೇಶದ ಆಗ್ರಾದ ಸಿವಿಲ್ ಲೈನ್ಸ್ ಪ್ರದೇಶದ ನಿವಾಸಿ ಮೋಹಿತ್ ಪ್ರಿಯದರ್ಶಿ (31) ಎಂದು ಗುರುತಿಸಲಾಗಿದೆ.
ಆಗಸ್ಟ್ 30 ರಂದು ಮಹಿಳೆಯೊಬ್ಬರು ದಾಖಲಿಸಿದ ದೂರಿನ ಮೇರೆಗೆ ದೆಹಲಿಯ ನೈಋತ್ಯ ಜಿಲ್ಲೆಯ ಕಿಶನ್‌ಗಢ ಪೊಲೀಸ್ ಠಾಣೆಯ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಕಿಶನ್‌ಗಢ ಗ್ರಾಮದ ನಿವಾಸಿಯಾಗಿರುವ ದೂರುದಾರರು, ಆಗಸ್ಟ್ 30 ರಂದು ರಾತ್ರಿ 10.20 ರ ಸುಮಾರಿಗೆ ಕಿಶನ್‌ಗಢ ಗ್ರಾಮದ ಶನಿ ಬಜಾರ್‌ನಲ್ಲಿದ್ದಾಗ, ವ್ಯಕ್ತಿಯೊಬ್ಬ ಹಿಡನ್ ಕ್ಯಾಮೆರಾ ಅಳವಡಿಸಿದ ಲೈಟರ್ ಆಕಾರದ ಸಣ್ಣ ಸಾಧನವನ್ನು ಬಳಸಿಕೊಂಡು ತನ್ನ ಒಪ್ಪಿಗೆಯಿಲ್ಲದೆ ತನ್ನ ಆಕ್ಷೇಪಾರ್ಹ ವಿಡಿಯೋಗಳನ್ನು ರೆಕಾರ್ಡ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿರುವುದಾಗಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಬಿಎನ್‌ಎಸ್ ಸೆಕ್ಷನ್ 77/78 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆಗಾಗಿ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.