ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದುಬೈ ಏರ್ ಶೋ ವೇಳೆ ಶುಕ್ರವಾರ ತೇಜಸ್ ಯುದ್ಧ ವಿಮಾನ ಪತನಗೊಂಡು ಮೃತಪಟ್ಟಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಪೈಲಟ್ ನಮಾಂಶ್ ಸ್ಯಾಲ್ ಪಾರ್ಥೀವ ಶರೀರವನ್ನು ಸ್ವದೇಶಕ್ಕೆ ತರಲಾಗಿದೆ.
ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಪಾರ್ಥಿವ ಶರೀರದ ಅಂತಿಮ ದರುಶನ ಪಡೆಯಲು ನೂರಾರು ಸ್ಥಳೀಯರು ಜಮಾಯಿಸಿದ್ದರು. ಈ ಸಂದರ್ಭ ಭಾರತೀಯ ವಾಯುಪಡೆಯಿಂದ ಗೌರವ ನಮನ ಸಲ್ಲಿಸಲಾಯಿತು.
ಶುಕ್ರವಾರ (ನ. 21) ದುಬೈನಲ್ಲಿ ನಡೆದ ವಿಮಾನ ಅಪಘಾತದಲ್ಲಿ ನಮಾಂಶ್ ಸಿಯಾಲ್ ಪ್ರಾಣ ಕಳೆದುಕೊಂಡಿದ್ದರು. ತೇಜಸ್ ವಿಮಾನ ದುರಂತದ ನಿಖರ ಕಾರಣ ತಿಳಿಯಲು ಐಎಎಫ್ ತನಿಖಾ ಸಮಿತಿಯನ್ನು ರಚಿಸಿದೆ.
2014ರಲ್ಲಿ 37 ವರ್ಷದ ವಿಂಗ್ ಕಮಾಂಡರ್ ನಮಾಂಶ್ ಅವರು ಪತ್ನಿ ಅಫ್ಸಾನ್ ಮದುವೆಯಾಗಿದ್ದರು. ಅವರಿಗೆ ಏಳು ವರ್ಷದ ಪುತ್ರಿ ಇದ್ದಳು. ಭಾರತೀಯ ವಾಯುಪಡೆಯ ಅಧಿಕಾರಿಯಾಗಿರುವ ನಮಾಂಶ್ ಅವರ ಪತ್ನಿ ವಿಂಗ್ ಕಮಾಂಡರ್ ಅಫ್ಸಾನ್ ಅವರು, ಕುಟುಂಬದವರೊಂದಿಗೆ ನಿಂತು ತಮ್ಮ ಪತಿಗೆ ಅಂತಿಮ ನಮನ ಸಲ್ಲಿಸಿದರು. ಕಣ್ಣೀರು ಹಾಕುತ್ತಲೇ ಪತಿಗೆ ‘ಸೆಲ್ಯೂಟ್’ ಹೊಡೆದ ದೃಶ್ಯ ಮನಕಲಕುವಂತಿತ್ತು.
ಸಕಲ ಸರ್ಕಾರಿ ಗೌರವಗಳು ಮತ್ತು ಕುಶಾಲತೋಪು ಹಾರಿಸಿದರು. ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಕುಟುಂಬಸ್ಥರು, ಸ್ಥಳೀಯರು ಮತ್ತು ಅಧಿಕಾರಿಗಳು ಕಣ್ಣೀರು ಹಾಕುತ್ತಲೇ ವಿದಾಯ ಹೇಳಿದರು.

