ಹೊಸದಿಗಂತ ವರದಿ, ಮಂಗಳೂರು:
ಕರಾವಳಿಯಲ್ಲಿ ಸ್ವ ಉದ್ಯೋಗದ ನೆಲೆಯಲ್ಲಿ ಜೇನು ಕೃಷಿ ಮಾಡುವ ಯುವಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೀಗ ಜೇನು ಕೃಷಿಗೆ ‘ಪ್ಲೇನ್‌ಬ್ರೂಡ್’ ಕಾಯಿಲೆ ಕಾಣಿಸಿಕೊಂಡಿದ್ದು, ಯುವ ಜೇನು ಕೃಷಿಕರನ್ನು ಚಿಂತೆಗೀಡು ಮಾಡಿದೆ.
ಪ್ರಸ್ತುತ ಜೇನು ಕೊಯ್ಲಿನ ಕಾಲ. ಈ ಸಮಯದಲ್ಲಿ ಸಂಸಾರ ಕೋಣೆ ಭರ್ತಿಯಾಗಿ ಜೇನು ಹುಳಗಳು ಸದಾ ಚಟುವಟಿಕೆಯಿಂದ ಕೂಡಿರುತ್ತವೆ. ಆದರೆ ಪ್ಲೇನ್ ಬ್ರೂಡ್ ಎಂಬ ಕಾಯಿಲೆ ಯಿಂದಾಗಿ ಲಾರ್ವಗಳು ಈಗ ಸಾವನ್ನಪ್ಪುತ್ತಿರುವುದು ಹೊಸ ಆತಂಕಗಳಿಗೆ ಕಾರಣವಾಗಿದೆ.
ಹಲವು ಬಗೆಯ ಕಾಯಿಲೆಗಳು
ಎರಿಯಲ್ಲಿರುವ ಲಾರ್ವ ಪ್ಯೂಪ, ಮೊಟ್ಟೆಗಳಿಗೆ ಬರುವ ರೋಗವನ್ನು ಬ್ರೂಡ್ ಡಿಸೀಸ್ ಎನ್ನುತ್ತಾರೆ. ಥಾಯ್‌ಸಾಕ್ ಬ್ರೂಡ್, ಯುರೋಪಿಯನ್ ಬ್ರೂಡ್, ಅಮೆರಿಕನ್ ಪವರ್ ಬ್ರೂಡ್ ಸೇರಿದಂತೆ ಹಲವಾರು ವಿಧಧ ಬ್ರೂಡ್ ರೋಗಗಳಿವೆ. ಚಾಪ್‌ಬ್ರೂಡ್, ಸ್ಯಾಕ್ ಬ್ರೂಡ್ ವೈರಸ್‌ನಿಂದ, ಪ್ಲೇನ್ ಬ್ರೂಡ್ ಬ್ಯಾಕ್ಟೀರಿಯಾಗಳಿಂದ ಪಸರಿಸುತ್ತದೆ. ಇದೀಗ ಥಾಯ್‌ಸಾಕ್ ಬ್ರೂಡ್ ರೋಗದಿಂದ ಸತ್ತಿರುವ ಲಾರ್ವಗಳಲ್ಲಿ ಪ್ಲೇನ್ ಬ್ರೂಡ್ ರೋಗ ಪಸರಿಸಿದ್ದು, ಜೇನು ಪೆಟ್ಟಿಗೆಯಲ್ಲಿರುವ ಲಾರ್ವಗಳು ಕಾಯಿಲೆಯಿಂದ ಸಾವನ್ನಪ್ಪುತ್ತಿವೆ.
೪೦ ವರ್ಷಗಳವರೆಗೂ ಬ್ಯಾಕ್ಟೀರಿಯಾ
ಥಾಯ್‌ಸಾಕ್ ಬ್ರೂಡ್ ಬಾಧಿಸಿದ ಜೇನು ಕುಟುಂಬಗಳಲ್ಲಿ ಕೆಲ ಸಮಯದಲ್ಲಿ ನೊಣಗಳು ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳುವ ಕಾರಣ ಹೆಚ್ಚಿನ ತೊಂದರೆಯಾಗುವುದಿಲ್ಲ. ಆದರೆ ಪ್ಲೇನ್ ಬ್ರೂಡ್ ಬಂದ ಜೇನುಗೂಡುಗಳಲ್ಲಿ ೪೦ ವರ್ಷಗಳವರೆಗೂ ಬ್ಯಾಕ್ಟೀರಿಯಾಗಳು ಜೀವಂತವಾಗಿರುವ ಸಾಧ್ಯತೆ ಇದೆ ಎಂದು ಜೇನುಕೃಷಿಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಪ್ರದೇಶದಲ್ಲಿ ಪ್ಲೇನ್ ಬ್ರೂಡ್ ಕಾಯಿಲೆ ಇಲ್ಲ. ಆದರೆ ಕರಾವಳಿಯ ಕೆಲ ಭಾಗಗಳಲ್ಲಿ ಥಾಯ್‌ಸಾಕ್ ಬ್ರೂಡ್ ಕಾಯಿಲೆ ಕಾಣಿಸಿಕೊಂಡಿರುವುದು ಜೇನುಕೃಷಿಕರಲ್ಲಿ ಸ್ವಲ್ಪ ಮಟ್ಟಿನ ಆತಂಕಕ್ಕೆ ಕಾರಣವಾಗಿದೆ. ಮೊಟ್ಟೆಬೆಳೆಯದೇ ಒಡೆಯುವುದು ಥಾಯ್‌ಸಾಕ್ ಬ್ರೂಡ್‌ನ ಲಕ್ಷಣವಾಗಿದ್ದು, ೧೯೯೧ರಲ್ಲಿ ಭಾರಿ ಪ್ರಮಾಣದಲ್ಲಿ ಥಾಯ್‌ಸಾಕ್ ಬ್ರೂಡ್ ಕಾಯಿಲೆ ಕಾಣಿಸಿಕೊಂಡು ಜೇನು ಕುಟುಂಬ, ಕೃಷಿ ಸಂಪೂರ್ಣವಾಗಿ ನಾಶವಾಗಿತ್ತು. ಮತ್ತೆ ಪುನಃ ಜೇನು ಕುಟಂಬಗಳು ಅಭಿವೃದ್ಧಿಯಾಗಿತ್ತು ಎಂದು ಪ್ರಗತಿಪರ ಜೇನು ಕೃಷಿಕ ಶಿರಂಕಲ್ಲು ಕೃಷ್ಣ ಭಟ್ ಹೇಳಿದ್ದಾರೆ.
ಜೇನು ಕೃಷಿಕ ಮೂಲಚಂದ್ರ ಅವರು ಹೇಳುವಂತೆ, ಪ್ರಸಕ್ತ ವರ್ಷ ನಮ್ಮ ಜೇನು ಗೂಡುಗಳಲ್ಲಿ ಹೆಚ್ಚಿನ ಕಾಯಿಲೆಗಳಲ್ಲ. ಈ ಹಿಂದೆ ಕೆಲ ವರ್ಷ ಥಾಯ್‌ಸಾಕ್ ಬ್ರೂಡ್ ಕಾಯಿಲೆ ಬಹುವಾಗಿ ಕಾಡಿತ್ತು. ಪ್ರಸಕ್ತ ಅಂತಹ ತೊಂದರೆ ಇಲ್ಲ. ಆದರೆ ಕಾಡು ಮರಗಳು, ತೆಂಗು, ಅಡಿಕೆ, ರಬ್ಬರ್ ಹೂ ಬಿಡುವ ಸಮಯದಲ್ಲಿ ಮಳೆಯಾದ ಕಾರಣ ಇಳು ವರಿ ಕಡಿಮೆಯಾಗಿದೆ. ಕಳೆದ ವರ್ಷ ನನಗೆ ೧೦ ಕ್ವಿಂಟಾಲ್ ಜೇನು ದೊರಕಿತ್ತು. ಈ ವರ್ಷ ೬ ಕ್ವಿಂಟಾಲ್‌ನಷ್ಟು ಕೊಯ್ಲು ಮಾಡಿದ್ದು, ಮುಂದಿನ ಕೊಯ್ಲಿಗೆ ಹೆಚ್ಚು ಜೇನು ಸಿಗಲಿಕ್ಕಿಲ್ಲ ಎಂದಿದ್ದಾರೆ.
ನಿಯಂತ್ರಣ ಹೇಗೆ ?
ವಿದೇಶಗಳಲ್ಲಿ ಅಮೆರಿಕನ್ -ಲ್ ಬ್ರೂಡ್ ಕಾಯಿಲೆ ಕಂಡುಬಂದ ಜೇನುಕುಟುಂಬಗಳನ್ನು ಕಾಲನಿ ಪೆಟ್ಟಿಗೆ ಕಾಲನಿ ಸಮೇತ ಸುಡುತ್ತಾರೆ.
ಪ್ಲೇನ್ ಬ್ರೂಡ್ ಕಂಡುಬಂದ ಕುಟುಂಬ ಪೆಟ್ಟಿಗೆಯಿಂದ ಹಾರಿ ಹೋಗಿದ್ದಲ್ಲಿ ಅದರ ಎರಿಗಳನ್ನು ತೆಗೆದು ಸುಟ್ಟುಹಾಕಬೇಕು.
ಪೆಟ್ಟಿಗೆಯನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು.
ಟೆಟ್ರಾಸೈಕ್ಲಿನ್ ಆಂಟಿ ಬಯೊಟಿಕ್ ಸಿಂಪಡಿಸುವ ಕ್ರಮವು ಇದೆ