ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಪ್ಲಾನ್: ಸಿದ್ದರಾಮಯ್ಯ ಸಂಪುಟ ನಿರ್ಧಾರಕ್ಕೆ ಹೈಕೋರ್ಟ್​​ ತಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಜಾಗದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಿಸಲು ಅನುಮತಿ ನೀಡಿದ್ದ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್​ನ ಧಾರವಾಡ ಪೀಠ ತಡೆ ನೀಡಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಆರಂಭಿಕ ಹಿನ್ನಡೆಯಾಗಿದೆ.

ಹುಬ್ಬಳ್ಳಿಯ ಕೇಶ್ವಾಪುರ ಸರ್ಕಲ್ ಬಳಿಯ 25 ಗುಂಟೆಗಿಂತಲೂ ಅಧಿಕ ಜಾಗದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕುಡಿಯುವ ನೀರು ಸಂಗ್ರಹಣೆಗೆ ಮೀಸಲಿಟ್ಟಿತ್ತು. ಈ ಜಾಗದಲ್ಲಿ ಕಾಂಗ್ರೆಸ್ ಕಚೇರಿ ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಶೇಕಡಾ 5 ರಷ್ಟು ಹಣವನ್ನು ಪಾಲಿಕೆಗೆ ನೀಡಿ, 25ಗುಂಟೆಗಿಂತಲೂ ಅಧಿಕ ಭೂಮಿಯ ಹಕ್ಕುನ್ನು ಪಡೆಯಲು ಕ್ಯಾಬಿನೆಟ್ ತೀರ್ಮಾನ ಮಾಡಿತ್ತು.

ಈ ನಿರ್ಧಾರಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರ ಮಹಾನಗರ ಪಾಲಿಕೆಯ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆ ಖರೀದಿಸಿ, ಅಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಲು ಮುಂದಾಗಿದೆ. ಈ ಭೂಮಿಯಲ್ಲಿ ಸದ್ಯ ಹುಬ್ಬಳ್ಳಿ ನಗರಕ್ಕೆ ನೀರು ಪೂರೈಸುವ ಜಲ ಸಂಗ್ರಹ ಬೃಹತ್ ಟ್ಯಾಂಕ್​ಗಳಿವೆ. ಈ ಸ್ಥಳಕ್ಕೆ ಸಾರ್ವಜನಿಕರಿಗೆ ನಿರ್ಬಂಧಿತ ಪ್ರದೇಶವಾಗಿದೆ. ನಿರ್ಬಂಧಿತ ಪ್ರದೇಶ ಜಾಗವನ್ನು ಪಕ್ಷದ ಕಚೇರಿ ಕೊಟ್ಟಿದ್ದು ಸರಿಯಾದ ಕ್ರಮವಲ್ಲ ಎಂದು ಪಾಲಿಕೆ ಬಿಜೆಪಿ ಸದಸ್ಯರು ಅಸಮಾಧಾನ ಹೊರ ಹಾಕಿದ್ದರು.
ಜೊತೆಗೆ ಇದನ್ನು ಪ್ರಶ್ನಿಸಿ ಬಿಜೆಪಿ ಸದಸ್ಯರಾದ ಸಂತೋಷ ಚವ್ಹಾಣ್ ಹಾಗೂ ಬೀರಪ್ಪ ನ್ಯಾಯಾಲಯದ ಮೋರೆ ಹೋಗಿದ್ದರು.

ವಾದ-ಪ್ರತಿವಾದ ಆಲಿಸಿದ ಕರ್ನಾಟಕ ಹೈಕೋರ್ಟ್​ನ ಧಾರವಾಡ ಪೀಠ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!