ಪುಟ್ಟ ಮಕ್ಕಳೊಂದಿಗೆ ಪ್ರವಾಸಕ್ಕೆ ಪ್ಲಾನ್ ಮಾಡುತ್ತಿದ್ದೀರಾ? ಹಾಗಿದ್ರೆ 7 ಅದ್ಭುತ ತಾಣಗಳತ್ತ ಹೋಗಿಬನ್ನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತಮ್ಮ ಪಟ್ಟ ಮಕ್ಕಳೊಂದಿಗೆ ಪ್ರಯಾಣ ಮಾಡುವುದು ಪೋಷಕರಿಗೆ ಮೋಜಿನ ಆದರೆ ಅಷ್ಟೇ ಕಷ್ಟಕರವಾದ ಪ್ರವಾಸವಾಗಿರುತ್ತದೆ. ಅದರಲ್ಲೂ ಮಕ್ಕಳನ್ನು ಸೆಳೆಯುವಂತಹ, ಅವರ ಮನಸ್ಸಿನಲ್ಲಿ ಸುಂದರ ನೆನಪಾಗಿ ಅಚ್ಚೊತ್ತಿ ಉಳಿಯುವಂತಹ ಹಾಗೂ ಅವರಿಗೆ ಸುರಕ್ಷಿತವಾದ ಪ್ರವಾಸಿ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತೊಂದು ಸವಾಲಾಗಿರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು – ಹಾಗೂ ಪೋಷಕರು ಇಬ್ಬರೂ ನಕ್ಕು ನಲಿದು ಆನಂದಿಸಬಲ್ಲ ಭಾರತದಲ್ಲಿನ ಕೆಲವು ಪ್ರವಾಸಿ ತಾಣಗಳ ಪಟ್ಟಿಯನ್ನು ನಾವು ಇಲ್ಲಿ ಸಂಗ್ರಹಿಸಿದ್ದೇವೆ. ಅಲ್ಲಿಗೆ ನೀವು ಮತ್ತು ನಿಮ್ಮ ಪುಟ್ಟ ಮಕ್ಕಳು ಒಟ್ಟಿಗೆ ಭೇಟಿ ನೀಡಬಹುದು ಮತ್ತು ಉತ್ತಮ ಸಮಯವನ್ನು ಜೊತೆಯಾಗಿ ಕಳೆಯಬಹುದು.!

1. ರಣ್ ಆಫ್ ಕಚ್, ಗುಜರಾತ್


ವಿಶೇಷವಾಗಿ ರಣ್ ಉತ್ಸವದ ಸಮಯದಲ್ಲಿ‌ ನೀವು ಇಲ್ಲಿಗೆ ಹೋದರೆ ಚೆನ್ನಾಗಿರುತ್ತದೆ. ಕಣ್ಣುಹಾಯಿಸಿದಷ್ಟೂ ವಿಸ್ತಾರವಾಗಿ ಚಾಚಿಕೊಂಡ ಮರುಭೂಮಿ, ಅಲ್ಲಿನ ಸಂಸ್ಕೃತಿ, ಜನಜೀವನ ನಿಮ್ಮನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಅಚ್ಚರಿಯಿಲ್ಲ. ನೀವು ಸ್ಥಳೀಯ ಸಮುದಾಯಗಳ ಕಲೆ ಮತ್ತು ಕರಕುಶಲತೆಯನ್ನು ಆನಂದಿಸುವ ಸಮಯದಲ್ಲೇ ನಿಮ್ಮ ಮಕ್ಕಳು ಅಲ್ಲಿನ ಒಂಟೆ ಸವಾರಿಯನ್ನು ಆನಂದಿಸಬಹುದು. ಇಲ್ಲಿನ ಸ್ಥಳೀಯ ಖಾದ್ಯಗಳು ಸಹ ಪ್ರಯತ್ನಿಸಲು ಯೋಗ್ಯವಾಗಿವೆ. ನಿಮ್ಮ ರಜೆಯ ಆಕರ್ಷಣೆಯನ್ನು ಹೆಚ್ಚಿಸಲು ನೀವು ಭುಜ್‌ಗೆ ಪ್ರವಾಸ ಕೈಗೊಳ್ಳುವುದು ಸೊಗಸಾಗಿರುತ್ತದೆ ನೋಡಿ.

2. ಮಜುಲಿ ದ್ವೀಪಗಳು, ಅಸ್ಸಾಂ

ಭಾರತದ ಅತಿ ದೊಡ್ಡ ನದಿಗಳ ಮೇಲಿರುವ ಈ ದ್ವೀಪಗಳು ಸುತ್ತಮುತ್ತಲಿನ ಸುಂದರವಾದ ದೃಶ್ಯಾವಳಿಗಳೊಂದಿಗೆ ನಿಮಗೆ ಸಮ್ಮೋಹನಗೊಳಿಸುವ ಅನುಭವವನ್ನು ನೀಡುತ್ತವೆ. ಭಾರತದ ಯಾವುದೇ ಪ್ರದೇಶಕ್ಕೆ ಹೋಲಿಸಿದರೆ ಈ ಸ್ಥಳದ ಭೂದೃಶ್ಯವು ವಿಭಿನ್ನವಾಗಿದೆ. ಇದು ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಅನುಭವಗಳನ್ನು ಮತ್ತು ಬಹಳಷ್ಟು ಸಸ್ಯ ಮತ್ತು ಪ್ರಾಣಿ ಪ್ರಬೇಧಶಗಳನ್ನು ಪರಿಚಯಿಸಲಿದೆ. ನೀವು ದ್ವೀಪಗಳಲ್ಲಿ ಪಕ್ಷಿವೀಕ್ಷಣೆ ಪ್ರವಾಸಗಳು ಅಥವಾ ಬೈಸಿಕಲ್ ಪ್ರವಾಸಗಳನ್ನು ಆನಂದಿಸಬಹುದು.

3. ವಿಶಾಖಪಟ್ಟಣಂ, ಆಂಧ್ರಪ್ರದೇಶ


ಇದು ಮಕ್ಕಳಿಗಾಗಿ ಉತ್ತಮವಾದ ಬೀಚ್ ತಾಣವಾಗಿದೆ. ಅವರು ಮರಳು ಮತ್ತು ದಡದಲ್ಲಿ ಆಟವಾಡುವುದನ್ನು ಆನಂದಿಸಬಹುದು, ಜೊತೆಗೆ ತಮ್ಮ ಮನಸ್ಸಿಗೆ ತಕ್ಕಂತೆ ಸಮುದ್ರದಲ್ಲಿ ಚಿನ್ನಾಟವಾಡಬಹುದು. ಜಲಾಂತರ್ಗಾಮಿ ವಸ್ತುಸಂಗ್ರಹಾಲಯವು ಇಲ್ಲಿನ ದೊಡ್ಡ ಆಕರ್ಷಣೆಯಾಗಿದೆ. ಅಲ್ಲಿಜಲಾಂತರ್ಗಾಮಿ ನೌಕೆಗಳ ಕಾರ್ಯವಿಧಾನವನ್ನು ಕಲಿಯಬಹುದು. ಇದು ಖಂಡಿತವಾಗಿಯೂ ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಒಂದು ರೀತಿಯ ಅದ್ಭುತ ಅನುಭವವಾಗಲಿದೆ.

4.ಅಂಡಮಾನ್ ದ್ವೀಪಗಳು

ರಮಣೀಯ ದ್ವೀಪಗಳಲ್ಲಿ ತಮ್ಮ ಜೀವನದ ಸುಂದರ ಕ್ಷಣಗಳನ್ನು ಆನಂದಿಸಲು ಪ್ರತಿ ವಯೋಮಾನದ ಜನರು ಬಯಸುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಅಂಡಮಾನ್ ನಿಸ್ಸಂದೇಹವಾಗಿ ನಿಮ್ಮ ಮಕ್ಕಳೊಂದಿಗೆ ಭೇಟಿ ನೀಡಲು ಅತ್ತುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಸೆಲ್ಯುಲರ್ ಜೈಲು ಪ್ರವಾಸ, ಜಲ ಕ್ರೀಡೆಗಳು ಮತ್ತು ವಸ್ತುಸಂಗ್ರಹಾಲಯಗಳಂತಹ ಸ್ಥಳಗಳಲ್ಲಿ ನಿಮ್ಮ ಮಕ್ಕಳೊಂದಿಗೆ ತೊಡಗಿಸಿಕೊಳ್ಳಲು ಹಲವಾರು ಚಟುವಟಿಕೆಗಳಿವೆ. ನೀವು ಪ್ರದೇಶದ ಸ್ಥಳೀಯ ಭಕ್ಷ್ಯಗಳನ್ನು ಪ್ರಯತ್ನಿಸಿದರೆ ಇಷ್ಟಪಡುತ್ತೀರಿ.

5. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ, ಉತ್ತರಾಖಂಡ

ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವುದು ಖಂಡಿತವಾಗಿಯೂ ಮಕ್ಕಳನ್ನು ಬೇರ್ಯಾವುದೇ ತಾಣಗಳಿಗಿಂತ ಹೆಚ್ಚು ಆಕರ್ಷಿಸುತ್ತದೆ. ಮಕ್ಕಳು ಸಾಧಾರಣವಾಗಿ ವನ್ಯಜೀವಿಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಅದನ್ನು ಹೇರಳವಾಗಿ ಅನುಭವಿಸಬಹುದು. ಉತ್ತರಾಖಂಡದಲ್ಲಿರುವ ಈ ವನ್ಯಜೀವಿ ಅಭಯಾರಣ್ಯವು ರಾಯಲ್ ಬೆಂಗಾಲ್ ಟೈಗರ್ಸ್, ಜಿಂಕೆ, ಪಕ್ಷಿಗಳು ಮತ್ತು ಅನೇಕ ಕಾಡು ಸಸ್ಯಗಳಿಗೆ ನೆಲೆಯಾಗಿದೆ.

6. ಗುಲ್ಮಾರ್ಗ್, ಕಾಶ್ಮೀರ


ನಿಮ್ಮ ಮಕ್ಕಳು ಇನ್ನೂ ಹಿಮವನ್ನು ನೋಡಿಲ್ಲದಿದ್ದರೆ, ನೀವು ಅವರೊಂದಿಗೆ ಗುಲ್ಮಾರ್ಗ್‌ಗೆ ವಿಹಾರಕ್ಕೆ ಹೋದರೆ ಅದ್ಭುತವಾಗಿರುತ್ತದೆ. ಚಳಿಗಾಲದಲ್ಲಿ ಅಲ್ಲಿಗೆ ನಿಮ್ಮ ಪ್ರವಾಸವನ್ನು ಯೋಜಿಸಿ. ಅಲ್ಲಿ ನೀವು ಮತ್ತು ನಿಮ್ಮ ಮಕ್ಕಳು ಸ್ಕೀಯಿಂಗ್, ಸ್ನೋಬೋರ್ಡಿಂಗ್, ಸ್ಲೆಡ್ಜ್ ಸವಾರಿ ಮುಂತಾದ ಹಿಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ನೀವು ಕೇಬಲ್ ಕಾರ್ ಸವಾರಿಯನ್ನು ಆನಂದಿಸಬಹುದು ಮತ್ತು ಮೇಲಿನಿಂದ ಹಿಮದಿಂದ ಆವೃತವಾದ ಪರ್ವತಗಳು ಮತ್ತು ರಮಣೀಯ ಭೂದೃಶ್ಯಗಳನ್ನು ವೀಕ್ಷಿಸಬಹುದು.

7. ನೈನಿತಾಲ್, ಉತ್ತರಾಖಂಡ

ಈ ಸುಂದರವಾದ ಪಟ್ಟಣವು ಬೆಟ್ಟಗಳ ನಡುವೆ ನೆಲೆಸಿದೆ. ಮತ್ತು ಇದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಈ ಪ್ರದೇಶದ ಸುತ್ತಲೂ ಹಲವಾರು ಪ್ರಶಾಂತವಾದ ಸರೋವರಗಳಿವೆ, ಇದು ಸೂರ್ಯಾಸ್ತದ ಸಮಯದಲ್ಲಿ ಶಾಂತವಾದ ದೋಣಿ ವಿಹಾರವನ್ನು ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಕೇಬಲ್ ಕಾರ್ ಸವಾರಿ ನಿಮಗೆ ಇಡೀ ಪಟ್ಟಣದ ಅವಲೋಕನವನ್ನು ನೀಡುತ್ತದೆ ಮತ್ತು ನೈನಿತಾಲ್ ಮೃಗಾಲಯವು ಈ ಪ್ರದೇಶದಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ನಿಮ್ಮ ಪುಟ್ಟ ಮಕ್ಕಳೊಂದಿಗೆ ಈ ಸುಂದರವಾದ ಸ್ಥಳಗಳಿಗೆ ನೀವು ಭೇಟಿ ನೀಡಿದರೆ ನಿಮ್ಮ ಮನಸ್ಸಿನಲ್ಲಿ ಅದೊಂದು ವಿಶೇಷ ಅನುಭವವಾಗಿ ದಾಖಲಾಗಲಿದೆ ಎಂಬ ವಿಶ್ವಾಸ ನಮ್ಮದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!