ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್‌ಪಿಜಿ ಸಿಲಿಂಡರ್ ಲಭ್ಯತೆಯಲ್ಲಿ ಉಂಟಾಗಿರುವ ಅಡಚಣೆಗಳಿಂದ ನಗರದಲ್ಲಿ ಪರ್ಯಾಯ ಅಡುಗೆ ಸಾಧನಗಳ ಬೇಡಿಕೆ ಹೆಚ್ಚಾಗಿದೆ. ವಿಶೇಷವಾಗಿ ಇಂಡಕ್ಷನ್ ಸ್ಟೌವ್‌ಗಳ ಖರೀದಿ ಕಳೆದ ಕೆಲವು ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟ ಹಲವು ಪಟ್ಟು ಹೆಚ್ಚಾಗಿದೆ. ಇದೇ ಹಿನ್ನೆಲೆ ಮನೆ ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು BESCOM ಮಹತ್ವದ ಸಲಹೆಗಳನ್ನು ಪ್ರಕಟಿಸಿದೆ.
ಸಂಸ್ಥೆಯ ಪ್ರಕಾರ, ಇಂಡಕ್ಷನ್ ಸ್ಟೌವ್ ಖರೀದಿಸುವಾಗ ISI ಪ್ರಮಾಣಿತ ಮತ್ತು ಕನಿಷ್ಠ 3-ಸ್ಟಾರ್ ಎನರ್ಜಿ ರೇಟಿಂಗ್ ಹೊಂದಿರುವ ಮಾದರಿಗಳನ್ನು ಆಯ್ಕೆ ಮಾಡಬೇಕು. ಜೊತೆಗೆ ಆಟೋ ಶಟ್‌ಆಫ್, ಚೈಲ್ಡ್ ಲಾಕ್, ಓವರ್‌ಹೀಟ್ ಪ್ರೊಟೆಕ್ಷನ್ ಮತ್ತು ಪ್ಯಾನ್ ಡಿಟೆಕ್ಷನ್ ವೈಶಿಷ್ಟ್ಯಗಳು ಇರುವುದನ್ನು ಖಚಿತಪಡಿಸಿಕೊಳ್ಳಬೇಕು.
ಇಂಡಕ್ಷನ್ ಸ್ಟೌವ್ ಬಳಸಲು ಪ್ರತ್ಯೇಕ 15A ಅಥವಾ ಹೆಚ್ಚಿನ ಲೋಡ್ ಹೊಂದಿರುವ ಸಾಕೆಟ್ ಅಳವಡಿಸುವುದು ಅತ್ಯಗತ್ಯ. ಮನೆಯ ವೈರಿಂಗ್ ದೋಷಪೂರಿತವಾಗಿದ್ದರೆ ಅಥವಾ ಸಮರ್ಪಕ ಅರ್ಥಿಂಗ್ ವ್ಯವಸ್ಥೆ ಇಲ್ಲದಿದ್ದರೆ ಬಳಕೆ ಅಪಾಯಕಾರಿಯಾಗಬಹುದು ಎಂದು BESCOM ಎಚ್ಚರಿಸಿದೆ.
ಮಾರುಕಟ್ಟೆಯಲ್ಲಿ 1200Wರಿಂದ 2000Wವರೆಗೆ ಸಾಮರ್ಥ್ಯದ ಮಾದರಿಗಳು ಲಭ್ಯವಿದ್ದು, ದಿನನಿತ್ಯ ಬಳಕೆಗೆ ಹೆಚ್ಚಿನ ಪವರ್ ಇರುವ ಮಾದರಿಗಳು ಉತ್ತಮ ಆಯ್ಕೆ ಎಂದು ತಜ್ಞರು ತಿಳಿಸಿದ್ದಾರೆ. ಜೊತೆಗೆ preset cooking modes ಇರುವ ಸ್ಟೌವ್‌ಗಳು ಅಡುಗೆಯನ್ನು ಸುಲಭಗೊಳಿಸುತ್ತವೆ.
ವಿದ್ಯುತ್ ಸಂಬಂಧಿತ ಯಾವುದೇ ತೊಂದರೆ ಎದುರಾದರೆ ತಕ್ಷಣ BESCOM 24×7 ಸಹಾಯವಾಣಿ 1912 ಅನ್ನು ಸಂಪರ್ಕಿಸಲು ಸೂಚಿಸಲಾಗಿದೆ.



