September 14, 2026
Monday, September 14, 2026
spot_img

ಎವರೆಸ್ಟ್ ಚಾರಣಿಗರಿಗೆ ವಿಷ ಉಣಿಸಿ ಕೋಟಿ ಕೋಟಿ ಲೂಟಿ: ನೇಪಾಳದಲ್ಲಿ ಶೆರ್ಪಾಗಳ ಕರ್ಮಕಾಂಡ ಬಯಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೌಂಟ್ ಎವರೆಸ್ಟ್ ಚಾರಣದ ಹೆಸರಿನಲ್ಲಿ ನಡೆದ ಭಾರೀ ವಂಚನೆ ಪ್ರಕರಣವೊಂದು ನೇಪಾಳದಲ್ಲಿ ಬೆಳಕಿಗೆ ಬಂದಿದೆ.

ಚಾರಣಿಗರ ಜೀವವನ್ನು ಅಪಾಯಕ್ಕೆ ಒಡ್ಡಿ, ಅಂತಾರಾಷ್ಟ್ರೀಯ ವಿಮಾ ಕಂಪನಿಗಳಿಂದ ಕೋಟಿ ಕೋಟಿ ರೂಪಾಯಿ ದೋಚುತ್ತಿದ್ದ ಸಂಘಟಿತ ಜಾಲವನ್ನು ನೇಪಾಳ ಪೊಲೀಸರು ಪತ್ತೆಹಚ್ಚಿದ್ದಾರೆ. ಶೆರ್ಪಾಗಳು, ಟ್ರೆಕ್ಕಿಂಗ್ ಸಂಸ್ಥೆಗಳ ಸಿಬ್ಬಂದಿ, ಹೆಲಿಕಾಪ್ಟರ್ ಸೇವಾ ಸಿಬ್ಬಂದಿ ಮತ್ತು ಆಸ್ಪತ್ರೆ ಸಿಬ್ಬಂದಿ ಸೇರಿ ಒಟ್ಟು 32 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ತೀವ್ರಗೊಳಿಸಲಾಗಿದೆ. ಸುಮಾರು 20 ಮಿಲಿಯನ್ ಡಾಲರ್‌ಗೂ ಹೆಚ್ಚು ಮೊತ್ತದ ವಂಚನೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಚಾರಣಿಗರೊಂದಿಗೆ ಹೋಗುತ್ತಿದ್ದ ಮಾರ್ಗದರ್ಶಕರು ಅವರ ಆಹಾರದಲ್ಲಿ ಬೇಕಿಂಗ್ ಸೋಡಾ ಬೆರೆಸಿ ಅಸ್ವಸ್ಥತೆ ಉಂಟುಮಾಡುತ್ತಿದ್ದರು. ಇದರಿಂದ ಹೊಟ್ಟೆ ನೋವು, ವಾಂತಿ ಹಾಗೂ ಎತ್ತರದ ಅಸ್ವಸ್ಥತೆ ಲಕ್ಷಣಗಳು ಕಾಣಿಸಿಕೊಂಡಾಗ, ತಕ್ಷಣ ಹೆಲಿಕಾಪ್ಟರ್ ಮೂಲಕ ರಕ್ಷಣೆಯ ಹೆಸರಿನಲ್ಲಿ ಸ್ಥಳಾಂತರ ಮಾಡಲಾಗುತ್ತಿತ್ತು. ಬಳಿಕ ನಿಗದಿತ ಆಸ್ಪತ್ರೆಗಳಲ್ಲಿ ಅನಗತ್ಯ ಚಿಕಿತ್ಸೆ ನೀಡಿ, ನಕಲಿ ದಾಖಲೆಗಳ ಆಧಾರದ ಮೇಲೆ ವಿಮಾ ಕಂಪನಿಗಳಿಂದ ಭಾರೀ ಮೊತ್ತದ ಹಣ ವಸೂಲಿ ಮಾಡಲಾಗುತ್ತಿತ್ತು.

ಇದನ್ನೂ ಓದಿ:

ಈ ವಂಚನೆ ಹಲವು ವರ್ಷಗಳಿಂದ ನಡೆಯುತ್ತಿದ್ದು, ಇತ್ತೀಚೆಗೆ ಬಂಧಿತ ರಕ್ಷಣಾ ಸಂಸ್ಥೆಗಳ ಅಧಿಕಾರಿಗಳ ವಿಚಾರಣೆ ವೇಳೆ ಸಂಪೂರ್ಣ ಜಾಲ ಬಯಲಾಗಿದೆ. ಈ ಪ್ರಕರಣದಿಂದ ನೇಪಾಳದ ಸಾಹಸ ಪ್ರವಾಸೋದ್ಯಮ ಕ್ಷೇತ್ರದ ವಿಶ್ವಾಸಾರ್ಹತೆಗೆ ದೊಡ್ಡ ಹೊಡೆತ ಬಿದ್ದಿದ್ದು, ಕೆಲವು ಅಂತಾರಾಷ್ಟ್ರೀಯ ವಿಮಾ ಕಂಪನಿಗಳು ಸೇವೆಯನ್ನು ಸ್ಥಗಿತಗೊಳಿಸುವ ಬಗ್ಗೆ ಚಿಂತನೆ ನಡೆಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !