ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ಚುನಾವಣೆ ಹೊತ್ತಲ್ಲೇ ರಾಜ್ಯದಲ್ಲಿ ಸೀತಾ ಮಂದಿರಕ್ಕೆ ಯೋಜನೆ ಹಾಕಿಕೊಂಡಿದ್ದು, 882 ಕೋಟಿ ರೂ. ವೆಚ್ಚದಲ್ಲಿ ದೇಗುಲದ ಪುನರ್ ಅಭಿವೃದ್ಧಿ ಕಾಮಗಾರಿಗೆ ಇಂದು (ಆ.8) ಕೇಂದ್ರ ಗೃಹ ಸಚಿವ ಅಮಿತ್ ಶಾ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸೀತಾ ದೇವಿಯ ಜನ್ಮಸ್ಥಳವೆಂದು ಪರಿಗಣಿಸಲಾದ ಬಿಹಾರದ ಸೀತಾಮರ್ಹಿ ಜಿಲ್ಲೆಯ ಪುನೌರಾಧಂನಲ್ಲಿರುವ ಜಾನಕಿ ಮಂದಿರದ ಪುನರ್ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 67 ಎಕರೆ ವ್ಯಾಪ್ತಿಯಲ್ಲಿರುವ ದೇವಸ್ಥಾನದ ಕಾಮಗಾರಿಯನ್ನು 11 ತಿಂಗಳೊಳಗೆ ಪೂರ್ಣಗೊಳಿರುವ ಸಾಧ್ಯತೆಯಿದ್ದು, 882 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸಿಎಂ ನಿತೀಶ್ ಕುಮಾರ್ ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ.
ಶಂಕುಸ್ಥಾಪನೆಗೆ 112 ನದಿಗಳಿಂದ ಪವಿತ್ರ ನೀರು ಹಾಗೂ 36 ಪವಿತ್ರ ಸ್ಥಳಗಳಿಂದ ಮಣ್ಣನ್ನು ತರಲಾಗಿದ್ದು, ಇಂದು ಮಧ್ಯಾಹ್ನ 2 ರಿಂದ 3:15 ಒಳಗಡೆ ಈ ಕಾರ್ಯಕ್ರಮ ನಡೆಯಲಿದೆ. ಕಾಶಿ, ದರ್ಭಾಂಗ ಮತ್ತು ಇತರ ನಗರಗಳ ಆರು ಆಚಾರ್ಯರು ಶಂಕುಸ್ಥಾಪನೆಯ ನೇತೃತ್ವ ವಹಿಸಲಿದ್ದಾರೆ. ಅಯೋಧ್ಯೆ, ವೃಂದಾವನ, ಮಥುರಾ, ಜನಕಪುರ ಮತ್ತು ವಾರಣಾಸಿಯಿಂದ ನೂರಾರು ಸಂತರು ಮತ್ತು ಋಷಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಅಯೋಧ್ಯೆಯ ರಾಮ ಮಂದಿರದ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಂಪುರ ವಿನ್ಯಾಸಗೊಳಿಸಿದ ಈ ದೇವಾಲಯವು 151 ಅಡಿ ಎತ್ತರವಿದ್ದು, 67 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿದೆ. ದೇವಾಲಯದ ಆವರಣವು ಮರಗಳು ಸೇರಿದಂತೆ ಹಚ್ಚಹಸಿರು ಜಾಗವನ್ನು ಹೊಂದಿದೆ. ಇಲ್ಲಿ ಸೀತಾ ವನ, ಲವ-ಕುಶ ವನ, ಪ್ರದರ್ಶನ ಮಂಟಪ, ವೇದ ಶಾಲೆ, ವಸ್ತುಸಂಗ್ರಹಾಲಯ, ಅತಿಥಿಗೃಹ, ಪಾರ್ಕಿಂಗ್ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಸ್ಥಳಗಳನ್ನು ಒಳಗೊಂಡಿದೆ.