Thursday, November 13, 2025

ಅಂತಾರಾಷ್ಟ್ರೀಯ ಮ್ಯಾಚ್ ಜೊತೆ ದೇಶಿ ಕ್ರಿಕೆಟ್ ಆಡಿ: ಕೊಹ್ಲಿ-ರೋಹಿತ್‌ಗೆ ಬಿಸಿಸಿಐ ಸ್ಪಷ್ಟ ಸಂದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಕದಿನ ಪಂದ್ಯಗಳಲ್ಲಿ ಮುಂದುವರಿಯಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ದೇಶೀಯ ಕ್ರಿಕೆಟ್ ಆಡಬೇಕೆಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಟೆಸ್ಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸದ್ಯ ಏಕದಿನ ಕ್ರಿಕೆಟ್​ನಲ್ಲಿ ಮಾತ್ರ ಮುಂದುವರೆದಿದ್ದಾರೆ. ಅಲ್ಲದೆ ಮುಂಬರುವ ಏಕದಿನ ವಿಶ್ವಕಪ್​ವರೆಗೆ ಭಾರತ ತಂಡವನ್ನು ಪ್ರತಿನಿಧಿಸುವ ಇರಾದೆಯಲ್ಲಿದ್ದಾರೆ. ಆದರೆ ಏಕದಿನ ವಿಶ್ವಕಪ್​ಗೂ ಮುನ್ನ ಭಾರತ ತಂಡ ಕೆಲವೇ ಕೆಲವು ಏಕದಿನ ಸರಣಿಗಳನ್ನು ಮಾತ್ರ ಆಡಲಿದೆ. ಹೀಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ದೇಶೀಯ ಟೂರ್ನಿಯಲ್ಲಿ ಆಡಲೇಬೇಕು ಎಂದು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಬಿಸಿಸಿಐ ತಿಳಿಸಿದೆ.

ಟೀಮ್ ಇಂಡಿಯಾ ಪರ ಆಡಬೇಕಿದ್ದರೆ ಫಿಟ್​ನೆಸ್ ಮುಖ್ಯವಾಗುತ್ತದೆ. ಸದ್ಯ ಕೊಹ್ಲಿ ಹಾಗೂ ರೋಹಿತ್ ಕೇವಲ ಏಕದಿನ ಸ್ವರೂಪದಲ್ಲಿ ಮಾತ್ರ ಮುಂದುವರೆದಿದ್ದಾರೆ. ಅವರು ತಮ್ಮ ಫಿಟ್​ನೆಸ್ ಅನ್ನು ಕಾಪಾಡಿಕೊಳ್ಳಲು ಹಾಗೂ ಫಾರ್ಮ್ ಅನ್ನು ಉಳಿಸಿಕೊಳ್ಳಲು ದೇಶೀಯ ಟೂರ್ನಿ ಆಡಬೇಕಾಗುತ್ತದೆ. ಹೀಗಾಗಿ ಇಬ್ಬರಿಗೂ ಮುಂಬರುವ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯುವಂತೆ ಸೂಚಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಬಿಸಿಸಿಐ ನೀಡಿರುವ ಈ ಸೂಚನೆ ಹಿನ್ನಲೆಯಲ್ಲಿ ವಿರಾಟ್ ಕೊಹ್ಲಿ 15 ವರ್ಷಗಳ ಬಳಿಕ ಮತ್ತೊಮ್ಮೆ ವಿಜಯ ಹಝಾರೆ ಟೂರ್ನಿಯಲ್ಲಿ ಕಾಣಿಸಿಕೊಳ್ಳಬಹುದು. ಕೊನೆಯ ಬಾರಿಗೆ ದೆಹಲಿ ಪರ ವಿಜಯ ಹಝಾರೆ ಟೂರ್ನಿ ಆಡಿದ್ದು ಫೆಬ್ರವರಿ 18, 2010 ರಂದು. ಇತ್ತ ರೋಹಿತ್ ಶರ್ಮಾ ಕೊನೆಯ ಬಾರಿ ವಿಜಯ ಹಝಾರೆ ಟೂರ್ನಿಯಲ್ಲಿ 2018 ರಲ್ಲಿ ಕಾಣಿಸಿಕೊಂಡಿದ್ದರು.

ವಿಜಯ ಹಝಾರೆ ಟೂರ್ನಿ ಯಾವಾಗ ಶುರು?
ದೇಶೀಯ ಅಂಗಳದ ಏಕದಿನ ಟೂರ್ನಿ ವಿಜಯ ಹಝಾರೆ ಟ್ರೋಫಿಯು ಡಿಸೆಂಬರ್ 24 ರಿಂದ ಶುರುವಾಗಲಿದೆ. 32 ತಂಡಗಳ ನಡುವಣ ಈ ಕದನದಲ್ಲಿ ವಿರಾಟ್ ಕೊಹ್ಲಿ ದೆಹಲಿ ಪರ ಹಾಗೂ ರೋಹಿತ್ ಶರ್ಮಾ ಮುಂಬೈ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ.

error: Content is protected !!