ಉಗ್ರ ಪನ್ನು ಹತ್ಯೆಗೆ ಸಂಚು: ಭಾರತೀಯ ಮಾಜಿ ಅಧಿಕಾರಿ ಮೋಸ್ಟ್‌ ವಾಂಟೆಡ್‌ ಎಂದು ಘೋಷಿಸಿದ FBI

ಹೊಸದಿಗಂತ ಡಿಜಿಟಲ್ ಡೆಸ್ಕ್;

ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ‌ಸಂಚು ರೂಪಿಸಿದ ಪ್ರಕರಣ ಸಂಬಂಧ ಭಾರತದ ನಿವೃತ್ತ ಗುಪ್ತಚರ ಅಧಿಕಾರಿಯೊಬ್ಬರನ್ನು (RAW Officer) ಮೋಸ್ಟ್‌ ವಾಂಟೆಡ್‌ ಎಂದು ಅಮೆರಿಕದ ಎಫ್‌ಬಿಐ (FBI) ಆಪಾದಿಸಿದೆ.

ಪ್ರಕರಣದಲ್ಲಿ ಭಾರತದ ನಿವೃತ್ತ ʻರಾʼ ಅಧಿಕಾರಿ ವಿಕಾಸ್‌ ಯಾದವ್‌ನನ್ನ (39) ಮೋಸ್ಟ್‌ ವಾಂಟೆಡ್‌ ಎಂದು ಹೆಸರಿಸಿದೆ. ಅಲ್ಲದೇ ವಿಕಾಸ್‌ ಯಾದವ್‌ನ ಮೂರು ಚಿತ್ರಗಳನ್ನ ಮೋಸ್ಟ್‌ ವಾಂಟೆಡ್‌ ಎನ್ನುವ ಪೋಸ್ಟರ್‌ ಸಹ ಬಿಡುಗಡೆ ಮಾಡಿದ್ದು, ಇದೇ ತಿಂಗಳ ಅಕ್ಟೋಬರ್‌ 10 ರಂದು ಬಂಧನದ ವಾರಂಟ್‌ ಜಾರಿಗೊಳಿಸಿದೆ.

ಅಮೆರಿಕ (USA) ಹಾಗೂ ಕೆನಡಾದ ದ್ವಿಪೌರತ್ವ ಹೊಂದಿರುವ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆ ಮಾಡಲು ಈ ನಿವೃತ್ತ ಅಧಿಕಾರಿ ಹಣ ನೀಡಿ ಹಂತಕರನ್ನು ನಿಯೋಜಿಸಿದ್ದರು ಎಂದು ಎಫ್‌ಬಿಐ ಆಪಾದಿಸಿದೆ. ಜೊತೆಗೆ ವಿಕಾಸ್‌ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನೂ ದಾಖಲು ಮಾಡಿದೆ. ಈ ಕುರಿತು ಯುಎಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ (DOJ) ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಕ್ರಿಮಿನಲ್ ಆರೋಪಗಳನ್ನು ಪ್ರಕಟಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೇ ಅವರು, ಅಮೆರಿಕ ನೆಲದಲ್ಲಿ ಈ ರೀತಿಯ ಕೃತ್ಯ ಎಸಗುವ ಪ್ರಯತ್ನವನ್ನ ಎಫ್‌ಬಿಐ ಸಹಿಸೋದಿಲ್ಲ ಎಂದಿದ್ದಾರೆ. ನಮ್ಮ ಪ್ರಜೆಗಳಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸಲು ನಾವು ಸರ್ವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.

ವಿಕಾಸ್‌ ಯಾದವ್‌ಅಲ್ಲದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸಹವರ್ತಿ ನಿಖಿಲ್ ಗುಪ್ತಾ ಎಂಬಾತನನ್ನ ಜೆಕ್ ರಿಪಬ್ಲಿಕ್‌ನಲ್ಲಿ ಬಂಧಿಸಲಾಗಿದೆ ಎಂದು ಸಹ ಕ್ರಿಸ್ಟೋಫರ್‌ ತಿಳಿಸಿದ್ದಾರೆ.

ಅಮೆರಿಕ ಎಫ್‌ಬಿಐ ಆಪಾದನೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಪ್ರತಿಕ್ರಿಯೆ ನೀಡಿದ್ದು, ವಿಕಾಸ್‌ ಯಾದವ್‌ ಎಂಬವರು ಭಾರತ ಸರ್ಕಾರದ ಉದ್ಯೋಗಿಯಲ್ಲ ಎಂದು ಖಚಿತಪಡಿಸಿದ್ದಾರೆ.

ಏನಿದು ಪ್ರಕರಣ?
ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ನೆಲೆಸಿರುವ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಕಳೆದ ವರ್ಷ ಯತ್ನ ನಡೆದಿತ್ತು. ಈ ಪ್ರಕರಣದಲ್ಲಿ ಭಾರತ ಸರ್ಕಾರದ ನಿವೃತ್ತ ರಾ ಉದ್ಯೋಗಿಯನ್ನು ವಿಕಾಸ್‌ನನ್ನ ಸಿಸಿ-1 (ಸಹ ಸಂಚುಕೋರ) ಆರೋಪಿ ಎಂದು ಹೆಸರಿಸಲಾಗಿದೆ.18 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಹಲವು ಸಾಕ್ಷ್ಯಗಳನ್ನು ಉಲ್ಲೇಖಿಸಲಾಗಿದೆ. ನ್ಯೂಯಾರ್ಕ್‌ನಲ್ಲಿ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಡಾಲರ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವ ಚಿತ್ರವನ್ನೂ ಸಹ ನಮೂದಿಸಲಾಗಿದೆ. ಇದು ಆರೋಪಿ ನಿಖಿಲ್ ಗುಪ್ತಾ ಮತ್ತು ವಿಕಾಸ್ ಯಾದವ್ ಅವರ ಪರವಾಗಿ ಕೊಲೆಗಾರನಿಗೆ ಹತ್ಯೆ ಮಾಡಲು ವ್ಯಕ್ತಿಯೊಬ್ಬರು ಪಾವತಿಸುತ್ತಿದ್ದಾರೆ ಎಂದು ಫೆಡರಲ್ ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!