ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹತ್ತು ವರ್ಷಗಳಲ್ಲಿ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಅಭೂತಪೂರ್ವ ಕ್ರಾಂತಿ ಆಗಿದ್ದು, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಜಾರಿಗೆ ಬಂದಿರುವ ಪಿಎಂ ಇ-ಡ್ರೈವ್ ಯೋಜನೆಯಿಂದ ಮಾಲಿನ್ಯರಹಿತ ಸಾರಿಗೆ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ದೆಹಲಿಯ ಭಾರತ್ ಮಂಟಪದಲ್ಲಿ ಐದು ದಿನಗಳ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಾಯುಮಾಲಿನ್ಯ ನಿವಾರಣೆ ನಿಟ್ಟಿನಲ್ಲಿ ಅನುಷ್ಠಾನಕ್ಕೆ ತರಲಾಗಿರುವ ಹಸಿರುಪೂರಕ ಉಪಕ್ರಮಗಳಿಂದ ದೇಶೀಯ ಎಕೋ ಆಟೋಮೊಬೈಲ್ ಕ್ಷೇತ್ರಕ್ಕೆ ಹೆಚ್ಚು ಅನುಕೂಲ ಆಗಿದೆ. ಎಲೆಕ್ಟ್ರಿಕ್ ವಾಹನಗಳು (ಇವಿಗಳು), ಶುದ್ಧ ಇಂಧನ ಪರಿಹಾರಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಪರಿಸರ ಸ್ನೇಹಿ ಸಾರಿಗೆಯಲ್ಲಿ ಭಾರತವು ನಾಗಲೋಟದಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದರು.
ಸ್ವಚ್ಛ ಭಾರತ್ ಅಭಿಯಾನವೂ ಸೇರಿದಂತೆ ಪ್ರಧಾನಮಂತ್ರಿಗಳ ಪರಿಸರ ಸ್ನೇಹಿ ನೀತಿಗಳು ಭಾರತದ ಹಸಿರು ಆಟೋಮೊಬೈಲ್ ಭವಿಷ್ಯಕ್ಕೆ ಖಾತರಿಯಾಗಿವೆ. ಪಿಎಂ ಇ-ಡ್ರೈವ್ ಯೋಜನೆಯಿಂದ ಈ ಕ್ಷೇತ್ರವು ಪರಿಣಾಮಕಾರಿಯಾಗಿ ವಾಯುಮಾಲಿನ್ಯ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತಿದೆ ಎಂದು ತಿಳಿಸಿದರು.
ಹಸಿರು ಆಟೋಮೊಬೈಲ್ ಕ್ಷೇತ್ರದ ಪ್ರಯೋಗಶೀಲತೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪಿಎಂ ಇ-ಡ್ರೈವ್ ಯೋಜನೆ ಹಾಗೂ ಉತ್ಪಾದನಾ ಸಂಪರ್ಕ ಸೌಲಭ್ಯದಿಂದ (ಪಿಎಲ್‌ಐ) ಹೆಚ್ಚು ಅನುಕೂಲ ಆಗಿದೆ ಎಂದು ಒತ್ತಿ ಹೇಳಿದರು.