ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೊದಲೇ ಗೊತ್ತಿದ್ದರೂ ಅವರ ಪರ ಪ್ರಚಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ ಮಾತನಾಡಿ, ಪ್ರಧಾನಿ ಮೋದಿ ಹಾಗೂ ಪ್ರಜ್ವಲ್ ರೇವಣ್ಣ ಜೊತೆಯಾಗಿರುವ ಫೋಟೋಗಳನ್ನು ತೋರಿಸಿದರು. ಪ್ರಜ್ವಲ್ ಅವರನ್ನು ಮೋದಿ ಮೆಚ್ಚಿದ್ದಲ್ಲದೆ, ಏಪ್ರಿಲ್ 14ರಂದು ಅವರಿಗೆ ಮತ ಕೇಳಿದರು. ಪ್ರಜ್ವಲ್ ಮಾಡಿರುವ ಕೆಲಸ ಸಂಪೂರ್ಣವಾಗಿ ಆಘಾತಕಾರಿಯಾಗಿದೆ, ನಮಗೆ ನಂಬಲು ಆಗುತ್ತಿಲ್ಲ. ಒಂದಲ್ಲ, ಎರಡಲ್ಲ ಸುಮಾರು 3,000 ವೀಡಿಯೋಗಳು ಮತ್ತು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಈ ದೇಶದ ಇತಿಹಾಸದಲ್ಲಿಯೇ ದೊಡ್ಡ ಅತ್ಯಾಚಾರವಲ್ಲದೆ ಮತ್ತೇನು? ಎಂದು ಪ್ರಶ್ನಿಸಿದ್ದಾರೆ.
ಏಪ್ರಿಲ್ 14ರಂದು ಮೋದಿಗೆ ಈ ವ್ಯಕ್ತಿ ಮಾಡುತ್ತಿರುವ ಈ ಘೋರ ಅಪರಾಧಗಳು ತಿಳಿದಿರಲಿಲ್ಲವೇ? ಪ್ರಜ್ವಲ್ ರೇವಣ್ಣನ ಬಗ್ಗೆ ಮತ್ತು ಅವರ ಅಪರಾಧಗಳ ಬಗ್ಗೆ ಮೋದಿಗೆ ಎಲ್ಲವೂ ತಿಳಿದಿತ್ತು ಎಂದು ಸುಪ್ರಿಯಾ ಆರೋಪಿಸಿದ್ದಾರೆ.
ಬಿಜೆಪಿಯ ನಾಯಕ ದೇವರಾಜೇಗೌಡ ಅವರು 2023ರ ಡಿಸೆಂಬರ್‌ನಲ್ಲಿ ಅಮಿತ್ ಶಾ, ಜೆಪಿ ನಡ್ಡಾ (ಬಿಜೆಪಿ ಅಧ್ಯಕ್ಷ), ನರೇಂದ್ರ ಮೋದಿ ಅವರಿಗೆ ಪ್ರಜ್ವಲ್ ರೇವಣ್ಣನ ಬಗ್ಗೆ ತಿಳಿಸಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಡಿ ಎಂದು ಮೇಲ್‌ಗಳನ್ನು ಬರೆದು ಪತ್ರಗಳನ್ನು ಬರೆದಿದ್ದಾರೆ. ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಈ ಪ್ರಕರಣದ ಬಗ್ಗೆ ಕ್ರಮಗಳನ್ನು ತೆಗೆದುಕೊಂಡಿದೆ. ಕರ್ನಾಟಕ ಮಹಿಳಾ ಆಯೋಗವು ಈ ವಿಷಯದ ಬಗ್ಗೆ ಸ್ವಯಂಪ್ರೇರಿತವಾಗಿ ತಿಳಿದುಕೊಂಡು ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದಿದೆ. ಈ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳಲು ಎಸ್ಐಟಿ ರಚಿಸಲಾಗಿದೆ. ಪ್ರಜ್ವಲ್ ಜೊತೆಗೆ ಅವರ ತಂದೆ ಎಚ್ಡಿ ರೇವಣ್ಣನವರನ್ನು ಕೂಡ ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿದೆ ಮತ್ತು ಸಮನ್ಸ್ ನೀಡಲಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಫೆಬ್ರವರಿ-ಮಾರ್ಚ್‌ನಲ್ಲಿ ಮೈತ್ರಿ ಮಾತುಕತೆಗಳ ನಡುವೆ ಮೈಸೂರಿಗೆ ಭೇಟಿ ನೀಡಿದಾಗ ಪ್ರಜ್ವಲ್ ಅವರ ಅಪರಾಧಗಳ ಬಗ್ಗೆ ಶಾ ಅವರನ್ನು ಹಲವಾರು ಬಿಜೆಪಿ ನಾಯಕರು ಎಚ್ಚರಿಸಿದ್ದರು ಎಂದು ಆರೋಪಿಸಿದ್ದಾರೆ.
ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ, ಎಲ್ಲರೂ ಎಲ್ಲಿದ್ದಾರೆ ಎಂಬುದು ಅವರಿಗೆ ಯಾವಾಗಲೂ ತಿಳಿದಿರುತ್ತದೆ. ಪ್ರಿಯಾಂಕಾ ಗಾಂಧಿ ಎರಡು ದಿನ ತಮ್ಮ ಮಗಳನ್ನು ಭೇಟಿಯಾಗಲು ಹೋದರೆ ಆ ವಿಷಯವೂ ಅಮಿತ್ ಶಾಗೆ ಗೊತ್ತಾಗುತ್ತದೆ. ಆದರೆ, ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಓಡಿಹೋಗುವ ವಿಚಾರ ಮಾತ್ರ ಅವರಿಗೆ ಗೊತ್ತಾಗಲಿಲ್ಲವೇ? ಎಸ್‌ಐಟಿ ರಚನೆಯಾದ ಕೆಲವೇ ಗಂಟೆಗಳಲ್ಲಿ ಪ್ರಜ್ವಲ್ ರೇವಣ್ಣ ದೇಶದಿಂದ ಓಡಿಹೋಗಿದ್ದಾರೆ. ಆತ ತನ್ನ ಸ್ವಂತ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾನೋ ಅಥವಾ ಇಲ್ಲವೋ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಟೀಕಿಸಿದ್ದಾರೆ.