ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು 77ನೇ ಸ್ವಾತಂತ್ರ್ಯೋತ್ಸವ ದಿನದ ಪ್ರಯುಕ್ತ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿಯವರು, ಮುಂದಿನ ತಿಂಗಳಲ್ಲಿ ದೇಶಾದ್ಯಂತ ವಿಶ್ವಕರ್ಮ ಯೋಜನೆ ಜಾರಿಗೊಳಿಸಲಾಗುವುದು ಎಂದು ಘೋಷಿಸಿದರು.
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದೇಶದ ಜನತೆಗೆ ಶುಭಾಶಯ ಕೋರಿ ಬಳಿಕ ತಮ್ಮ ಭಾಷಣದಲ್ಲಿ ಹಲವು ವಿಷಯಗಳನ್ನು ಮೋದಿ ಪ್ರಸ್ತಾಪಿಸಿದರು. ಈ ವೇಳೆ ಸರ್ಕಾರವು ಸಾಂಪ್ರದಾಯಿಕ ಕೌಶಲ್ಯ ಹೊಂದಿರುವವರಿಗೆ ಮುಂದಿನ ತಿಂಗಳಲ್ಲಿ 13,000 ರಿಂದ 15,000 ಕೋಟಿ ರೂ.ಗಳ ಹಂಚಿಕೆಯೊಂದಿಗೆ ‘ವಿಶ್ವಕರ್ಮ ಯೋಜನೆ’ಯನ್ನು ಪ್ರಾರಂಭಿಸಲಿದೆ ಎಂದು ತಿಳಿಸಿದರು.
ವಿಶ್ವಕರ್ಮ ಯೋಜನೆಯನ್ನು 2023ರ ಬಜೆಟ್‌ನಲ್ಲಿ ಘೋಷಿಸಲಾಯಿತು. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳ ಉತ್ಪನ್ನಗಳು ಹಾಗೂ ಸೇವೆಗಳ ಗುಣಮಟ್ಟ, ಪ್ರಮಾಣ ಮತ್ತು ವ್ಯಾಪ್ತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಮತ್ತು ಅವುಗಳನ್ನು ದೇಶೀಯ ಹಾಗೂ ಜಾಗತಿಕ ಮೌಲ್ಯ ಸರಪಳಿಯೊಂದಿಗೆ ಸಂಯೋಜಿಸುತ್ತದೆ. ಅಂತಹ ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕೆ ಇದು ಕಾರಣವಾಗುತ್ತದೆ. ವಿಶೇಷವಾಗಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಇತರ ಹಿಂದುಳಿದ ಸಮುದಾಯಗಳು, ಮಹಿಳೆಯರು, ತೃತೀಯ ಲಿಂಗಿಗಳು ಮತ್ತು ಸಮಾಜದ ಇತರ ದುರ್ಬಲ ವರ್ಗಗಳಿಗೆ ಸೇರಿದವರಿಗೆ ಈ ಯೋಜನೆ ಸಹಕಾರಿಯಾಗಲಿದೆ.
ಇದೇ ವೇಳೆ ಭಾರತವು ಕೃಷಿ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವುದರಿಂದ ರೈತರ ಪ್ರಯತ್ನಗಳಿಗಾಗಿ ಪ್ರಧಾನಿ ಧನ್ಯವಾದಗಳನ್ನು ಅರ್ಪಿಸಿದರು.