ಹೊಸದಿಗಂತ ಡಿಜಿಟಲ್ ಡೆಸ್ಕ್:
ಎನ್‌ಡಿಎ 25 ವರ್ಷಗಳನ್ನು ಪೂರೈಸಿದ ಸಂದರ್ಭವನ್ನು ಹೆಚ್ಚು ಆತ್ಮವಿಶ್ವಾಸದಿಂದ ಮತ್ತು ಇಚ್ಛಾಶಕ್ತಿಯೊಂದಿಗೆ ಆಚರಿಸಲು ಮತ್ತು ಮುನ್ನಡೆಸಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಈ ಕುರಿತು ಸಂಸತ್ತಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ , ಸೋಮವಾರ ನಿಧನರಾದ ಆರ್‌ಎಸ್‌ಎಸ್ ಮುಖಂಡ ಮದನ್ ದಾಸ್ ದೇವಿ, ಗಿರೀಶ್ ಬಾಪಟ್ ಸೇರಿದಂತೆ ಮೂರು ಮಂದಿ ದಿವಂಗತ ಸಂಸದರು ಮತ್ತು ರತನ್ ಲಾಲ್ ಕಟಾರಿಯಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಬಿಜೆಪಿ ಸಂಸದೀಯ ಸಭೆ ಪ್ರಾರಂಭವಾಯಿತು.
ಇದು ಎನ್‌ಡಿಎ ಮೈತ್ರಿಕೂಟದ 25 ನೇ ವರ್ಷವಾಗಿದೆ. ಬಿಜೆಪಿಯ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್‌ಕೆ ಅಡ್ವಾಣಿ ಅವರ ಪರಂಪರೆಯಾಗಿದೆ ಈ ಮೈತ್ರಿಕೂಟ ಎಂದು ಮೋದಿ ಹೇಳಿದರು. ಹಾಗಾಗಿ ರಜತ ಮಹೋತ್ಸವವನ್ನು ನಾವು ಆಚರಿಸಬೇಕು. ಸಭೆಗಳನ್ನು ನಡೆಸುವುದರಿಂದ ಹಿಡಿದು ವಿಚಾರ ವಿನಿಮಯದವರೆಗೆ ಎಲ್ಲ ರೀತಿಯಲ್ಲೂ ತೊಡಗಿಸಿಕೊಳ್ಳಬೇಕು ಎಂಬುದಾಗಿ ಪ್ರಧಾನಿ ಸಲಹೆ ನೀಡಿದ್ದಾರೆ ಎಂದು ಜೋಶಿ ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದ್ದು, ದೇಶವು ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಮೂರನೇ ಸ್ಥಾನ ತಲುಪಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ .ನಾವು 2014 ರಲ್ಲಿ ಅಧಿಕಾರಕ್ಕೆ ಬಂದಾಗ, ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪೈಕಿ 10 ನೇ ಸ್ಥಾನದಲ್ಲಿದ್ದೆವು. ಇದೀಗ ಎರಡನೇ ಅವಧಿಯಲ್ಲಿ ಐದನೇ ಸ್ಥಾನವನ್ನು ತಲುಪಿದ್ದೇವೆ. ಮೂರನೇ ಅವಧಿಯಲ್ಲಿ ನಾವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ ಎಂಬುದಾಗಿ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಜೋಶಿ ಹೇಳಿದ್ದಾರೆ.