ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಕೇಂದ್ರ ಸಚಿವರಾದ ಎಲ್.ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೊಂಗಲ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು ಮತ್ತು ತಮಿಳುನಾಡಿನ ಪ್ರತಿಯೊಂದು ಮನೆಯಿಂದಲೂ ಹಬ್ಬದ ಸಂಭ್ರಮವನ್ನು ವೀಕ್ಷಿಸಬಹುದು ಎಂದು ಹೇಳಿದರು.
ಎಲ್ಲಾ ನಾಗರಿಕರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂತೃಪ್ತಿಯ ಹರಿವು ನಿರಂತರವಾಗಿ ಹರಿಯಲಿ ಎಂದು ಮೋದಿ ಹಾರೈಸಿದರು.
ಬಳಿಕ ಮಾತನಾಡಿದ ಅವರು, ಸಂತ ಕವಿ ತಿರುವಳ್ಳುವರ್ ಅವರನ್ನು ಉಲ್ಲೇಖಿಸಿ, ‘ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾವಂತ ನಾಗರಿಕರು, ಪ್ರಾಮಾಣಿಕ ಉದ್ಯಮಿಗಳು ಹಾಗೂ ಉತ್ತಮ ಬೆಳೆಗಳ ಪಾತ್ರ’ವನ್ನು ಒತ್ತಿ ಹೇಳಿದರು. ಅಲ್ಲದೇ ರಾಷ್ಟ್ರದ ಏಕತೆಯನ್ನು ಬಲಪಡಿಸುವ ಸಂಕಲ್ಪಕ್ಕೆ ‘ ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ’ ಎಂದು ಕರೆ ನೀಡಿದರು.
ಪೊಂಗಲ್ ಸಮಯದಲ್ಲಿ, ಹೊಸ ಬೆಳೆಯನ್ನು ದೇವರಿಗೆ ಅರ್ಪಿಸುವುದು ಈ ಹಬ್ಬದ ಸಂಪ್ರದಾಯ. ಭಾರತದ ಪ್ರತಿಯೊಂದು ಹಬ್ಬವು ಬೆಳೆ ಮತ್ತು ರೈತರಿಗೆ ಸಂಬಂಧಿಸಿವೆ ಎಂದು ಅವರು ಹೇಳಿದರು.
ರಾಗಿ ಮತ್ತು ತಮಿಳು ಸಂಪ್ರದಾಯಗಳ ನಡುವಿನ ಸಂಬಂಧದ ಕುರಿತು ಮಾತನಾಡಿದ ಅವರು, ರಾಗಿ ಬಗ್ಗೆ ಈಗ ಹೆಚ್ಚು ಅರಿವು ಮೂಡಿದೆ. ಅನೇಕ ಯುವಕರು ರಾಗಿ ಮೇಲೆ ಸ್ಟಾರ್ಟ್‌ಅಪ್ ಉದ್ಯಮಗಳನ್ನು ಕೈಗೊಂಡಿದ್ದಾರೆ. ರಾಗಿ ಕೃಷಿ ಮಾಡುತ್ತಿರುವ 3 ಕೋಟಿಗೂ ಹೆಚ್ಚು ರೈತರು ನೇರ ಲಾಭ ಪಡೆಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರಧಾನಿ
ಸಚಿವ ಎಲ್. ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಭಾಗವಹಿಸಿದ ಪ್ರಧಾನಿ ಸಾಂಪ್ರದಾಯಿಕ ಉಡುಗೆ ತೊಟ್ಟು ಗಮನ ಸೆಳೆದಿದ್ದಾರೆ. ಕಪ್ಪು ಕೋಟ್ ಜತೆಗೆ ಬಿಳಿ ಪಂಚೆ ಹಾಗೂ ಎಡ ಭುಜದ ಮೇಲೆ ಶಲ್ಯ ಧರಿಸಿ ಮಿಂಚಿದರು.