ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗುಜರಾತಿನ ವಡೋದರಾ ಮತ್ತು ಆನಂದ್ ಅನ್ನು ಸಂಪರ್ಕಿಸುವ ಸೇತುವೆಯ ಮಧ್ಯ ಭಾಗ ಕುಸಿದು ಇಂದು 9 ಜನರು ಸಾವನ್ನಪ್ಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯನ್ನು ನೀಡಿದೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿರುವ ಪ್ರಧಾನಿ ಮೋದಿ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ.’ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಸೇತುವೆ ಕುಸಿದು ಸಂಭವಿಸಿದ ಜೀವಹಾನಿ ತೀವ್ರ ದುಃಖಕರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ’ ಎಂದು ಪ್ರಧಾನಿ ಕಚೇರಿ ಪೋಸ್ಟ್ ಮಾಡಿದೆ.
ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಗಾಯಾಳುಗಳಿಗೆ 50,000 ರೂ. ಪರಿಹಾರವನ್ನು ಘೋಷಿಸಿದ್ದಾರೆ.
ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ 4 ದಶಕಗಳಷ್ಟು ಹಳೆಯದಾದ ಸೇತುವೆಯ ಒಂದು ಭಾಗ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯ ಗುಜರಾತ್ ಅನ್ನು ರಾಜ್ಯದ ಸೌರಾಷ್ಟ್ರ ಪ್ರದೇಶಕ್ಕೆ ಸಂಪರ್ಕಿಸುವ ಮಹಿಸಾಗರ್ ನದಿಯ ಮೇಲಿರುವ ಗಂಭೀರ ಸೇತುವೆಯ ಸ್ಲ್ಯಾಬ್ ಕುಸಿದು 9 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ವಡೋದರಾ ಗ್ರಾಮೀಣ) ರೋಹನ್ ಆನಂದ್ ಖಚಿತಪಡಿಸಿದ್ದಾರೆ.