ಹೊಸದಿಗಂತ ವರದಿ ಧಾರವಾಡ:
ಇಂದು ಭೋಪಾಲ್‌ನ ರಾಣಿಕಮಲಾಪತಿ ರೈಲ್ವೆ ನಿಲ್ದಾಣದಲ್ಲಿ ಧಾರವಾಡ-ಹುಬ್ಬಳ್ಳಿ-ಬೆಂಗಳೂರು ಮಾರ್ಗದಲ್ಲಿ ಚಲಿಸುವ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿಗೆ ವರ್ಚವಲ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು.
ಈ ಕಾರ್ಯಕ್ರಮದ ಕುರಿತು ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಂದೇ ಭಾರತ ರೈಲು ನಿರ್ಮಾತೃ ಭಾರತ. ಈ ರೈಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ಒಳಗೊಂಡಿದೆ. ದೇಶದಲ್ಲಿ ಪ್ರಸ್ತುತ 23 ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದ್ದು, ಭವಿಷ್ಯದಲ್ಲಿ 400 ರೈಲು ಓಡಿಸುವ ಗುರಿ ಹೊಂದಿದ್ದೇವೆ ಎಂದರು.
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮಾತನಾಡಿ, ವಂದೇ ಭಾರತ್ ರೈಲು ಭಾರತದ ಸ್ವಾಭಿಮಾನದ ಸಂಕೇತ. ಜೊತೆಗೆ ಮೇಕ್ ಇನ್ ಇಂಡಿಯಾದ ದೊಡ್ಡ ಪ್ರತಿಫಲ. ಭವಿಷ್ಯದಲ್ಲಿ ವಿದ್ಯುತ್ತೀಕರಣದ ರೈಲಿನ ವೇಗ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ.ಸಂಕನೂರ, ಹು-ಧಾ ಪಾಲಿಕೆ ಮೇಯರ್ ವೀಣಾ ಬರದ್ವಾಡ, ಉಪಮೇಯರ್ ಸತೀಶ್ ಹಾನಗಲ್, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಜೋತಿ ಪಾಟೀಲ, ಕವಿತಾ ಕಬ್ಬೇರ, ರೈಲ್ವೆ ಜಿಎಂ ಸಂಜಯ ಕಿಶೋರ ಇದ್ದರು.