ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್ಎಸ್) ಗಗನಯಾತ್ರಿ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ.
ಜೂನ್ 25ರಂದು ಆಕ್ಸಿಯಮ್ -4 ಕಾರ್ಯಾಚರಣೆಯ ಭಾಗವಾಗಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಇತರ ಮೂವರು ಗಗನಯಾತ್ರಿಗಳ ಜೊತೆ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ಎಕ್ಸ್ನ ಡ್ರ್ಯಾಗನ್ ಕ್ಯಾಪ್ಸುಲ್ನಲ್ಲಿ ಐಎಸ್ಎಸ್ಗೆ ಹಾರಿದ್ದರು. ಈ ಮೂಲಕ 40 ವರ್ಷಗಳ ನಂತರ ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಗಗನಯಾತ್ರಿಯೆನಿಸಿಕೊಂಡ ಶುಭಾಂಶು ಶುಕ್ಲಾ ಇತಿಹಾಸ ಸೃಷ್ಟಿಸಿದ್ದರು.
ಪ್ರಧಾನ ಮಂತ್ರಿ ಕಚೇರಿಯು ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ, ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಹನ ನಡೆಸಿದರು’ ಎಂದು ಸಂವಾದದ ಫೋಟೋವನ್ನು ಪೋಸ್ಟ್ ಮಾಡಿದೆ.
ಆಕ್ಸಿಯಮ್ -4ರ ಯಶಸ್ವಿ ಉಡಾವಣೆಯ ನಂತರ, ಪ್ರಧಾನಿ ಮೋದಿ ಅವರು ಈ ಮಿಷನ್ ಪೈಲಟ್ ಶುಭಾಂಶು ಶುಕ್ಲಾ ಮತ್ತು ಇತರ ಸಿಬ್ಬಂದಿ ಸದಸ್ಯರಾದ ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್ ಮತ್ತು ಮಿಷನ್ ತಜ್ಞರಾದ ಪೋಲೆಂಡ್ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಪು ಅವರನ್ನು ಅಭಿನಂದಿಸಿದ್ದರು.