ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆಯಡಿಲ್ಲಿ ಕೇಂದ್ರ ಸರಕಾರ ದೇಶಾದ್ಯಂತ 508 ರೈಲು ನಿಲ್ದಾಣಗಳನ್ನು ಮರು ಅಭಿವೃದ್ಧಿಗೊಳಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಏಕಕಾಲದಲ್ಲಿ ಚಾಲನೆ ನೀಡಿದರು.
ಕೇಂದ್ರ ಸಚಿವರು ಸೇರಿದಂತೆ ಹಲವು ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯಪಾಲರು ಆಯಾ ರಾಜ್ಯಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡರು.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಬುದ್ಗಾಮ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದಕ್ಕಾಗಿ ಕೇಂದ್ರ ಸರಕಾರ ಒಟ್ಟು 24 ಸಾವಿರದ 470 ಕೋಟಿ ರೂಪಾಯಿ ವ್ಯಯಿಸುತ್ತಿದೆ. 508 ನಿಲ್ದಾಣಗಳಲ್ಲಿ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೂ ಸೇರಿವೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರ 49, ಮಹಾರಾಷ್ಟ್ರ 44, ಪಶ್ಚಿಮ ಬಂಗಾಳ 37, ಮಧ್ಯಪ್ರದೇಶ 34, ಅಸ್ಸಾಂ 32, ಒಡಿಶಾ 25, ಪಂಜಾಬ್ 22, ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18, ಹರಿಯಾಣ 15, ಕರ್ನಾಟಕದ 13 ರೈಲ್ವೆ ನಿಲ್ದಾಣಗಳು ಸೇರಿವೆ.
ಆಧುನಿಕ ಪ್ರಯಾಣಿಕರ ಸೌಕರ್ಯ,ಉತ್ತಮ ವಿನ್ಯಾಸ, ಸಂಚಾರ ಪರಿಚಲನೆ, ಇಂಟರ್-ಮೋಡಲ್ ಏಕೀಕರಣ ಮತ್ತು ಪ್ರಯಾಣಿಕರ ಮಾರ್ಗದರ್ಶನಕ್ಕಾಗಿ ಉತ್ತಮವಾಗಿ ವಿನ್ಯಾಸಗೊಳಿಸಲಾದ ಸಂಕೇತಗಳನ್ನು ಖಾತ್ರಿಪಡಿಸುತ್ತದೆ. ನಿಲ್ದಾಣದ ಕಟ್ಟಡಗಳ ವಿನ್ಯಾಸವು ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪದಿಂದ ಕೂಡಿರುತ್ತದೆ.