ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಯ ಪ್ರಮುಖ ನಾಯಕರು ಬುಧವಾರ ಮಹತ್ವದ ಸಭೆ ನಡೆಸಿದ್ದಾರೆ. ಈ ಡಿಸೆಂಬರ್ನಲ್ಲಿ ನಾಲ್ಕು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಏಪ್ರಿಲ್ ಮೇ ನಲ್ಲಿ ಲೋಕಸಭೆ ಚುನಾವಣೆ ಇದೆ. ಈ ಕುರಿತು ಬುಧವಾರ ರಾತ್ರಿ ಪಕ್ಷದ ಹಿರಿಯರ ಮಟ್ಟದಲ್ಲಿ ಚರ್ಚೆಗಳು ನಡೆದಿವೆ.
ಪಕ್ಷ ಹಾಗೂ ಸರ್ಕಾರದ ಹಂತದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು, ಆಡಳಿತ ಹಾಗೂ ಪಕ್ಷ ಸಂಘಟನೆಯನ್ನು ಚುರುಕುಗೊಳಿಸಲು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪ್ರಮುಖರು ಬುಧವಾರ ರಾತ್ರಿ ಐದು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಈ ಸಭೆ ಆಯೋಜನೆಗೊಂಡಿತ್ತು.
ಮುಂದಿನ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಹೇಗೆ ತಯಾರಿ ನಡೆಸಬೇಕು. ಬಿಜೆಪಿ ಆಡಳಿತವಿರುವ ರಾಜ್ಯಗಳು ಹಾಗೂ ಇತರೆ ರಾಜ್ಯಗಳಲ್ಲಿ ಹೇಗೆ ಕಾರ್ಯತಂತ್ರ ರೂಪಿಸಬೇಕು ಎನ್ನುವ ಸಲಹೆಗಳನ್ನು ಹಿರಿಯರು ನೀಡಿದ್ದಾರೆ.
ಚುನಾವಣೆಯಲ್ಲಿ ನಮ್ಮ ಪ್ರಣಾಳಿಕೆ ಹೇಗಿರಬೇಕು, ಎರಡು ಅವಧಿಯಲ್ಲಿ ಎನ್ಡಿಎ ಕೈಗೊಂಡಿರುವ ಸುಧಾರಣೆಗಳು, ಬಿಜೆಪಿಯ ಕಾರ್ಯತಂತ್ರ, ಪ್ರತಿಪಕ್ಷಗಳ ಕಾರ್ಯಸೂಚಿಗೆ ಸಮರ್ಥವಾಗಿ ಉತ್ತರ ನೀಡುವ ಪಡೆಯನ್ನು ಪ್ರತಿ ರಾಜ್ಯದಲ್ಲೂ ಕಟ್ಟುವ ಬಗ್ಗೆ ಮಾತುಕತೆಗಳು ನಡೆದಿವೆ.
ಕರ್ನಾಟಕದಲ್ಲಿ ಮೋದಿ ಹಾಗೂ ಇತರ ನಾಯಕರ ನಿರಂತರ ಪ್ರಚಾರದ ನಡುವೆಯೂ ಬಿಜೆಪಿ ಸೋಲು ಅನುಭವಿಸಿದ ಕುರಿತೂ ಚರ್ಚೆಗಳು ಆಗಿವೆ. ಡಿಸೆಂಬರ್ನಲ್ಲಿ ರಾಜಸ್ತಾನ, ಮಧ್ಯಪ್ರದೇಶ, ತೆಲಂಗಾಣ ಹಾಗೂ ಛತ್ತೀಸ್ಗಡದಲ್ಲಿ ವಿಧಾನ ಸಭೆ ಚುನಾವಣೆಗಳಿದ್ದು, ಇಲ್ಲಿಯೂ ಎಚ್ಚರಿಕೆಯಿಂದ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.
ಅಮೆರಿಕಾ ಪ್ರವಾಸ ಮುಗಿಸಿದ ಬಳಿಕ ಏಕರೂಪ ನಾಗರೀಕ ಸಂಹಿತೆ ಜಾರಿ ಸೇರಿದಂತೆ ಬಿಜೆಪಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಕಾರ್ಯಕ್ರಮ ಜಾರಿ ಮುನ್ಸೂಚನೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಇದೇ ಚುನಾವಣೇ ವಿಷಯವೂ ಆಗುವ ಸಾಧ್ಯತೆಯೂ ಇದೆ. ಇದೇ ನಿಟ್ಟಿನಲ್ಲಿ ಬಿಜೆಪಿ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿದೆ.