ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಪ್ರಧಾನಮಂತ್ರಿಯವರು ಪವಿತ್ರ ದೇಗುಲದಲ್ಲಿ ಸಾಂಪ್ರದಾಯಿಕ ಪಹಾಡಿ ಉಡುಪನ್ನು ಧರಿಸಿ ಕೇದಾರನಾಥನ ದರ್ಶನ ಪಡೆದರು. ಪ್ರಧಾನಿ ಧರಿಸಿದ ಈ ವಸ್ತ್ರವನ್ನು ಹಿಮಾಚಲ ಪ್ರದೇಶದ ಚಂಬಾ ಮಹಿಳೆಯರು ಸ್ವತಃ ತಮ್ಮ ಕೈಯಿಂದ ತಯಾರಿಸಿದ್ದಾರೆ. ಈ ಉಡುಪನ್ನು ಜನಪ್ರಿಯವಾಗಿ ‘ಚೋಳ ದೋರಾ’ ಎಂದು ಕರೆಯಲಾಗುತ್ತದೆ.
#WATCH | PM Narendra Modi performs 'puja' at the Kedarnath Dham
(Source: DD) pic.twitter.com/9i9UkQ5jgr
— ANI (@ANI) October 21, 2022
ಡೆಹ್ರಾಡೂನ್‌ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ನಿವೃತ್ತ ಗವರ್ನರ್ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಆತ್ಮೀಯವಾಗಿ ಬರಮಾಡಿಕೊಂಡರು. ಕೇದಾರನಾಥನ ದರ್ಶನದ ಬಳಿಕ ಬಳಿಕ ಆದಿ ಗುರು ಶಂಕರಾಚಾರ್ಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರು. ಪ್ರಧಾನಮಂತ್ರಿಯವರು ಇಂದು ಕೇದಾರನಾಥ ರೋಪ್‌ವೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಮಂದಾಕಿನಿ ಅಸ್ಥಪಥ ಮತ್ತು ಸರಸ್ವತಿ ಅಸ್ತಪಥದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ನಂತರ ಬದರಿನಾಥವನ್ನು ತಲುಪಿ ಅಲ್ಲಿ ಶ್ರೀ ಬದರಿನಾಥ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆಯನ್ನು ನೆರವೇರಿಸಲಿದ್ದಾರೆ.
ಬಳಿಕ ಮಾಣ ಗ್ರಾಮದಲ್ಲಿ ರಸ್ತೆ ಮತ್ತು ರೋಪ್‌ವೇ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿ, ನದಿ ತೀರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಜೊತೆಗೆ ಆಗಮನ ಪ್ಲಾಜಾ ಮತ್ತು ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ಕೇದಾರನಾಥದಲ್ಲಿ ರೋಪ್‌ವೇ ಸುಮಾರು 9.7 ಕಿಮೀ ಉದ್ದವಿರಲಿದೆ ಇದು ಗೌರಿಕುಂಡ್ ಅನ್ನು ಕೇದಾರನಾಥಕ್ಕೆ ಸಂಪರ್ಕಿಸುತ್ತದೆ. ಎರಡು ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 6-7 ಗಂಟೆಗಳಿಂದ ಕೇವಲ 30 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಹೇಮಕುಂಡ್ ರೋಪ್‌ವೇ ಗೋವಿಂದಘಾಟ್‌ನಿಂದ ಹೇಮಕುಂಡ್ ಸಾಹಿಬ್‌ಗೆ ಸಂಪರ್ಕ ಕಲ್ಪಿಸುತ್ತದೆ. ಇದು ಸುಮಾರು 12.4 ಕಿಮೀ ಉದ್ದವಿರುತ್ತದೆ ಪ್ರಯಾಣದ ಸಮಯವನ್ನು ಒಂದು ದಿನಕ್ಕಿಂತ ಹೆಚ್ಚು ಸಮಯದಿಂದ ಕೇವಲ 45 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ವ್ಯಾಲಿ ಆಫ್ ಫ್ಲವರ್ಸ್ ನ್ಯಾಷನಲ್ ಪಾರ್ಕ್‌ಗೆ ಗೇಟ್‌ವೇ ಆಗಿರುವ ಘಂಗಾರಿಯಾವನ್ನು ಈ ರೋಪ್‌ವೇ ಸಂಪರ್ಕಿಸುತ್ತದೆ ಎಂದು ಪಿಎಂಒ ಹೇಳಿಕೆ ತಿಳಿಸಿದೆ.
ಸುಮಾರು 2,430 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿರುವ ರೋಪ್‌ವೇಗಳು ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿದ್ದು, ಇದು ಸುರಕ್ಷಿತ ಮತ್ತು ಸ್ಥಿರವಾದ ಸಾರಿಗೆ ವಿಧಾನವನ್ನು ಒದಗಿಸುತ್ತದೆ. ಈ ಮೂಲಸೌಕರ್ಯ ಅಭಿವೃದ್ಧಿಯು ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ನೀಡುತ್ತದೆ. ಇದು ಆ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕತೆಯನ್ನು ನೀಡುತ್ತದರ ಜೊತೆಗೆ ಬಹು ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾಗುತ್ತದೆ.
ಭೇಟಿಯ ವೇಳೆ ಸುಮಾರು 1000 ಕೋಟಿ ರೂ.ಗಳ ರಸ್ತೆ ಅಗಲೀಕರಣ ಯೋಜನೆಗಳ ಶಂಕುಸ್ಥಾಪನೆಯೂ ನಡೆಯಲಿದೆ. ಎರಡು ರಸ್ತೆ ವಿಸ್ತರಣೆ ಯೋಜನೆಗಳು – NH07 ಜೋಶಿಮಠದಿಂದ ಮಲಾರಿ NH107B – ಗಡಿ ಪ್ರದೇಶಗಳಿಗೆ ಸರ್ವಋತು ರಸ್ತೆ ಸಂಪರ್ಕವನ್ನು ಒದಗಿಸುವ ಮತ್ತೊಂದು ಹೆಜ್ಜೆಯಾಗಿದೆ.
ಕೇದಾರನಾಥ ಮತ್ತು ಬದರಿನಾಥ ಹಿಂದೂಗಳ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಈ ಪ್ರದೇಶವು ಪೂಜ್ಯ ಸಿಖ್ ಯಾತ್ರಿಕರ ತಾಣಗಳಲ್ಲಿ ಒಂದಾದ ಹೇಮಕುಂಡ್ ಸಾಹಿಬ್‌ಗೆ ಹೆಸರುವಾಸಿಯಾಗಿದೆ. ಸಂಪರ್ಕ ಯೋಜನೆಗಳು ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಲ್ಲಿ ಪ್ರವೇಶವನ್ನು ಸುಲಭಗೊಳಿಸಲು ಮತ್ತು ಮೂಲಭೂತ ಮೂಲಸೌಕರ್ಯಗಳನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.