ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಮಹಿಳೆಯರಿಬ್ಬರ ಬೆತ್ತಲೆ ಮೆರವಣಿಗೆಯ ವಿಡಿಯೋ ವೈರಲ್ ಆಗಿದ್ದು, ಇದೀಗ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
ಮೇ 4 ರಂದು ಆಘಾತಕಾರಿ ಘಟನೆ ನಡೆದಿದ್ದು, ಕುಕಿ ಸಮುದಾಯಕ್ಕೆ ಸೇರಿದ ಇಬ್ಬರು ಮಣಿಪುರಿ ಮಹಿಳೆಯರ ಲೈಂಗಿಕ ದೌರ್ಜನ್ಯ ನಡೆಸಿ, ಬೆತ್ತಲೆ ಮೆರವಣಿಗೆ ನಡೆಸಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಈ ಕುರಿತು ಸಂಸತ್ ಭವನದ ಬಳಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಣಿಪುರ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಇದು ಇಡೀ ಸಮಾಜವೇ ತಲೆತಗ್ಗಿಸುವಂತಹ ಘಟನೆ. ಇದರಿಂದ ಮಹಿಳೆಯರ ಘನತೆ, ಗೌರವಕ್ಕೆ ಧಕ್ಕೆಯಾಗಿದೆ ಎಂದಿದ್ದಾರೆ.
ಘಟನೆ ಸಂಬಂಧ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹೆರದಾಸ್ (32) ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಕೈಗೊಳ್ಳಲಾಗಿದೆ.
ಮಣಿಪುರ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಶೇರ್ ಮಾಡದಂತೆ ಆದೇಶ ನೀಡಿದೆ.
ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು, ಭಾರತೀಯ ಕಾನೂನುಗಳನ್ನು ಅನುಸರಿಸುವುದು ಕಡ್ಡಾಯ ಎಂದು ಸರ್ಕಾರ ಹೇಳಿದೆ.
ಏನಿದು ಮಣಿಪುರ ಘಟನೆ?
ಮಣಿಪುರದ ಕೊಂಗ್ಪೊಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ನಡೆದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆಯರಿಬ್ಬರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಅಲ್ಲದೆ ಸಂತ್ರಸ್ತರ ಮೇಲೆ ಗ್ಯಾಂಗ್ರೇಪ್ ಮಾಡಿದ್ದಾರೆ ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಆರೋಪ ಮಾಡಿದೆ.
ಮಣಿಪುರ ರಾಜಧಾನಿ ಇಂಫಾಲ್ನಿಂದ 35 ಕಿ.ಮೀ. ಅಂತರದಲ್ಲಿ ಈ ಅಮಾನುಷ ಘಟನೆ ನಡೆದಿದ್ದು, ಈ ಸಂಬಂಧ ಎಫ್ಐಆರ್ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.