ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸೆಮಿ ಹೈಸ್ಪೀಡ್ ವಂದೇ ಭಾರತ್ ರೈಲುಗಳ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಅನಾವರಣಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಏಕಕಾಲದಲ್ಲಿ ಐದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಪ್ರಾರಂಭಿಸಲಿದ್ದಾರೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನ ರಾಣಿ ಕಮಲಾಪತಿ ರೈಲು ನಿಲ್ದಾಣವು ವೇದಿಕೆಯಾಗಲಿದೆ. ಮಂಗಳವಾರ ಬೆಳಗ್ಗೆ 10.30ಕ್ಕೆ ಪ್ರಧಾನಿ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಲಿರುವ ಈ ಐದು ವಂದೇ ಭಾರತ್ ರೈಲುಗಳಲ್ಲಿ ರಾಣಿಕಮಾಲಾಪತಿ-ಬಜಾಲ್ಪುರ, ಖಜುರಾಹೊ – ಭೋಪಾಲ್ – ಇಂದೋರ್, ಮಡಗಾಂವ್ – ಮುಂಬೈ, ಧಾರವಾಡ – ಬೆಂಗಳೂರು, ರಾಂಚಿ – ಪಾಟ್ನಾ ಸಂಚರಿಸಲಿವೆ ಎಂದು ರೈಲ್ವೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅನಾವರಣಗೊಳ್ಳಲಿರುವ ಐದು ರೈಲುಗಳೊಂದಿಗೆ, ದೇಶಾದ್ಯಂತ ವಂದೇ ಭಾರತ್ ರೈಲುಗಳ ಸಂಖ್ಯೆ 23ಕ್ಕೆ ತಲುಪುತ್ತದೆ.
ಪ್ರಧಾನಿ ಮೋದಿ ಮಧ್ಯಪ್ರದೇಶ ರಾಜ್ಯಕ್ಕೆ ಭೇಟಿ ನೀಡುವ ವಿವರಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. “ನಾನು ಮಂಗಳವಾರ (ಜೂನ್ 27) ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಭೋಪಾಲ್ಗೆ ಬರುತ್ತೇನೆ. ಮೊದಲು ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ಐದು ಭಾರತ್ ರೈಲುಗಳನ್ನು ಫ್ಲ್ಯಾಗ್ ಆಫ್ ಮಾಡುತ್ತೇನೆ. ಈ ರೈಲುಗಳು ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಗೋವಾ, ಬಿಹಾರ ಮತ್ತು ಜಾರ್ಖಂಡ್ನಲ್ಲಿ ಸಂಪರ್ಕವನ್ನು ಸುಧಾರಿಸುತ್ತದೆ” ಎಂದು ಪೋಸ್ಟ್ ಮಾಡಲಾಗಿದೆ.