ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದ ಬಳಿಕ ನಾಳೆ ಈಜಿಪ್ಟ್‌ಗೆ ಭೇಟಿ ನೀಡಲಿದ್ದಾರೆ. ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಮೋದಿ ಇದೇ ಮೊದಲ ಬಾರಿಗೆ ಈಜಿಪ್ಟ್ ಗೆ ಭೇಟಿ ನೀಡುತ್ತಿದ್ದು, ಜೂನ್ 24 ರಿಂದ 25ಕ್ಕೆ ಪ್ರಧಾನಿ ಮೋದಿ ಕೈರೋಗೆ ಪ್ರಯಾಣಿಸಲಿದ್ದಾರೆ.
ಅವರ ಈಜಿಪ್ಟ್ ಪ್ರವಾಸದಲ್ಲಿ 11ನೇ ಶತಮಾನದಲ್ಲಿ ನಿರ್ಮಾಣವಾದ ಅಲ್-ಹಕೀಮ್ ಮಸೀದಿಗೆ (Al-Hakim Mosque) ಭೇಟಿ ನೀಡಲಿದ್ದಾರೆ. ಮೊದಲ ವಿಶ್ವ ಯುದ್ಧದ ಅವಧಿಯಲ್ಲಿ ಈಜಿಪ್ಟ್‌ಗಾಗಿ ಹೋರಾಡಿ ಮಡಿದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ಈ ವರ್ಷದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಫತ್ತಾಹ್ ಎಲ್ – ಸಿಸಿ ತಮ್ಮ ದೇಶಕ್ಕೆ ಆಗಮಿಸುವಂತೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದರು. ಅಧ್ಯಕ್ಷ ಸಿಸಿ ಅವರೊಂದಿಗಿನ ಮಾತುಕತೆ ಹೊರತಾಗಿ ಈಜಿಪ್ಟ್ ಸರ್ಕಾರದ ಹಿರಿಯ ಗಣ್ಯರು, ಕೆಲವು ಪ್ರಮುಖ ವ್ಯಕ್ತಿಗಳು ಮತ್ತು ಈಜಿಪ್ಟ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಪ್ರಧಾನಿ ಮೋದಿ ಸಂವಹನ ನಡೆಸುವ ಸಾಧ್ಯತೆಯಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈಗಾಗಲೆ ತಿಳಿಸಿದೆ.