ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಸಾರಥ್ಯದ ಕೇಂದ್ರ ಸರಕಾರ ಒಂಭತ್ತು ವರ್ಷಗಳನ್ನು ಯಶ್ವಿಯಾಗಿ ಪೂರೈಸಿದ್ದು, ಬಡವರು, ರೈತರು ಮತ್ತು ಅವಕಾಶ ವಂಚಿತರನ್ನು ಗಮನದಲ್ಲಿಟ್ಟುಕೊಂಡು ನಡೆಸಿದ ಉತ್ತಮ ಆಡಳಿತದ ಪರಿಣಾಮ ಇಂದು ದೇಶದಲ್ಲಿ ಅತ್ಯಂತ ವೇಗದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 9 ವರ್ಷಗಳಲ್ಲಿ ಮೋದಿ ಅಭಿವೃದ್ಧಿಯ ಕನಸ್ಸನ್ನು ಸಾಕಾರಗೊಳಿಸಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಭಗೀರಥ ಪ್ರಯತ್ನ ಅವರದ್ದಾಗಿದೆ ಎಂದರು.
ಸೆಂಗೋಲ್ ಪರಿಚಯಿಸುವ ಮೂಲಕ ನಾಗರಿಕತೆಯ ಜಾಗೃತಿ ಕುರಿತು ಹೆಮ್ಮೆ ಮೂಡಿಸಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಕೋವಿಡ್ ಸಾಂಕ್ರಾಮಿಕದ ವೇಳೆ ಅಭಿವೃದ್ಧಿ ಹೊಂದಿದ ದೇಶಗಳೇ ಕೈ ಚೆಲ್ಲಿದ್ದವು. ಆದರೆ ಭಾರತದಲ್ಲಿ ಮೋದಿ ಅವರ ಕರ್ತವ್ಯನಿಷ್ಠೆಯ ಪರಿಣಾಮವಾಗಿ ಉಚಿತ ಲಸಿಕೆ ಲಭಿಸಿತ್ತು. ಇದು ಪ್ರಧಾನಿಯವರ ಬದ್ಧತೆಯನ್ನು ಅನಾವರಣಗೊಳಿಸಿದೆ ಎಂದು ಅವರು ವಿವರಿಸಿದರು.
ಭಾರತದಲ್ಲಿ ಕಟ್ಟಿಗೆ, ನೀರು, ಶೌಚಾಲಯ, ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸಿದ ದೂರದೃಷ್ಟಿಯ ನಾಯಕ ಮೋದಿ. ಪಾರ್ಲಿಮೆಂಟ್ ಹೌಸ್ ಒಂದೆಡೆ ಕಟ್ಟಿಸಿದ ಅವರು, ಇನ್ನೊಂದೆಡೆ ಉಜ್ವಲ, ಜನ್ಧನ್ ಖಾತೆ, ಆಯುಷ್ಮಾನ್ ಯೋಜನೆ, ಸ್ಯಾನಿಟರಿ ಪ್ಯಾಡ್ ವಿತರಣೆಯಂತಹ ಯೋಜನೆಗಳನ್ನೂ ಅನುಷ್ಠಾನಕ್ಕೆ ತಂದಿದ್ದಾರೆ ಎಂದರು.
75 ಸಾವಿರ ಅಮೃತ ಸರೋವರ ನಿರ್ಮಾಣದ ಯೋಜನೆಯನ್ನು ಜಾರಿ, ಅಲ್ಲದೆ ರಾಮಮಂದಿರ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತಂದವರು ಪ್ರಧಾನಿ ಮೋದಿ.
ವಿವಿಧ ದೇಶಗಳಲ್ಲಿ ಸಂಘರ್ಷ ಉಂಟಾದಾಗ ಪ್ರಧಾನಿಯವರು ಭಾರತೀಯರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಜಿ 20, ವಿದೇಶಗಳಿಗೆ ಪ್ರಧಾನಿಯವರ ಭೇಟಿ ಮೊದಲಾದವು ಭಾರತದ ಬಗ್ಗೆ ಇದ್ದ ಅಭಿಪ್ರಾಯವನ್ನು ಬದಲಿಸಿವೆ. ಹೆಚ್ಚು ವಿದೇಶಿ ಹೂಡಿಕೆ ಈಗ ನಮ್ಮಲ್ಲಿಗೆ ಬರುವಂತಾಗಿದೆ ಎಂದರು.
ನೂತನ ಸಂಸತ್ ಭವನವು ನಮ್ಮ ಹೆಮ್ಮೆಯ ಕಟ್ಟಡ. ಹೊಸ ತಂತ್ರಜ್ಞಾನಕ್ಕೆ ಉದಾಹರಣೆ ಇದಾಗಿದೆ. ಭಾರತದ ಸಂಸ್ಕೃತಿಯ ಅತ್ಯುತ್ತಮ ವಿಚಾರಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. ರಾಜದಂಡದ (ಸೆಂಗೋಲ್) ಪ್ರತಿಷ್ಠಾಪನೆಯೂ ಆಗಿದೆ ಎಂದು ಅವರು ಹೇಳಿದರು.