ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯು ಭಾರತದ ಆರ್ಥಿಕತೆಯ ಮೇಲೆ ಹೆಚ್ಚು ಪ್ರಭಾವ ಬೀರಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
“ಭಾರತದ ಉತ್ತಮ ನಾಯಕ ಮತ್ತು ರಷ್ಯಾದ ಉತ್ತಮ ಸ್ನೇಹಿತ ನರೇಂದ್ರ ಮೋದಿಯವರು ಕೆಲವು ವರ್ಷಗಳ ಹಿಂದೆ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿದರು. ಇದು ಭಾರತದ ಆರ್ಥಿಕತೆಯ ಮೇಲೆ ಬಹಳ ಪರಿಣಾಮ ಬೀರಿದೆ” ಎಂದು ಪುಟಿನ್ ತಿಳಿಸಿದ್ದಾರೆ.
ರಷ್ಯಾದಲ್ಲಿ ದೇಶೀಯ ಉತ್ಪನ್ನಗಳನ್ನು ಉತ್ತೇಜಿಸುವ ಸಲುವಾಗಿ ಭಾರತದ ಈ ವಿಚಾರವನ್ನು ಅವರು ಉದಾಹರಣೆಯಾಗಿ ಚರ್ಚಿಸಿದ್ದಾರೆಂದು ವರದಿಯಾಗಿದೆ.
ನವದೆಹಲಿಯಲ್ಲಿ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಇತ್ತೀಚೆಗೆ ಮಾತನಾಡಿ, ರಷ್ಯಾ ಮತ್ತು ಭಾರತದ ಪಾಲುದಾರಿಕೆ ವಿಶ್ವಕ್ಕೆ ಬಲವನ್ನು ತೋರಿಸಿದೆ. ಇದರಿಂದಾಗಿ ಜಗತ್ತಿನಲ್ಲಿ ಎರಡೂ ದೇಶಗಳು ಬಲವಾಗಿ ಬೆಳೆಯುತ್ತಿವೆ ಎಂದಿದ್ದರು. ಆದರೆ ರಷ್ಯಾದ ಬಗ್ಗೆ ಪ್ರತಿದಿನ ಜಾಗತಿಕ ಮಟ್ಟದಲ್ಲಿ ಸುಳ್ಳು ಸುದ್ದಿಗಳು ಹಬ್ಬುತ್ತಿವೆ. ಅಲ್ಲದೇ ರಷ್ಯಾ ಮತ್ತು ಭಾರತದ ಸಂಬಂಧವನ್ನು ಅಡ್ಡಿಪಡಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದರು.