ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಮಟ್ಟದಲ್ಲಿ ಇಂದು ಭಾರತೀಯ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ದೇಶಕ್ಕೆ ಹೆಮ್ಮೆ ತರುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ತಮ್ಮ ‘ಮನ್ ಕಿ ಬಾತ್’ ನ 134 ನೇ ಸಂಚಿಕೆಯಲ್ಲಿ ಮಾತನಾಡಿರುವ ಅವರು, ಇತ್ತೀಚೆಗೆ ಕ್ರೀಡಾಕೂಟಗಳಲ್ಲಿ ಅದ್ಭುತ ಪ್ರದರ್ಶನ ನೀಡಿ, ಹಳೆಯ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದ ನಾಲ್ಕು ಪ್ರಮುಖ ಅಥ್ಲೀಟ್‌ಗಳನ್ನು ಕೊಂಡಾಡಿದರು.
ಹೊಸ ದಾಖಲೆ ಸೃಷ್ಟಿಸಿದ ಅಥ್ಲೀಟ್‌ಗಳು
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ಸ್ ಫೆಡರೇಶನ್ ಸ್ಪರ್ಧೆಗಳಲ್ಲಿ ತಮ್ಮ ವಿಭಾಗಗಳಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಕ್ಕಾಗಿ ಗುರಿಂದರ್‌ವೀರ್ ಸಿಂಗ್, ವಿಶಾಲ್ ಟಿಕೆ, ತೇಜಸ್ವಿನ್ ಶಂಕರ್, ದೇವ್ ಮೀನಾ ಮತ್ತು ಕುಲದೀಪ್ ಕುಮಾರ್ ಅವರನ್ನು ಶ್ಲಾಘಿಸಿದ್ದಾರೆ.
ಗುರಿಂದರ್‌ವೀರ್ ಸಿಂಗ್ ಮತ್ತು ಅನಿಮೇಶ್ ಕುಜುರ್ ಅವರಂತಹ ಯುವ ಕ್ರೀಡಾಪಟುಗಳ ಪ್ರದರ್ಶನವು ದೇಶದಲ್ಲಿ ಕ್ರೀಡೆಯಲ್ಲಿ ಹೆಚ್ಚುತ್ತಿರುವ ಆಸಕ್ತಿಗೆ ಸಾಕ್ಷಿಯಾಗಿದೆ. ಯುವಕರಲ್ಲಿ ಅವರ ಆಟವು ಹೊಸ ಆತ್ಮವಿಶ್ವಾಸವನ್ನು ತುಂಬುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಕಠಿಣ ಪರಿಶ್ರಮದಿಂದ ವಿಶಾಲ್ ಕುಮಾರ್ ದೇಶದ ಕೀರ್ತಿ ಹೆಚ್ಚಿಸಿದರು. ಹೈಜಂಪ್ ಮತ್ತು ಡೆಕಾಥ್ಲಾನ್‌ನಲ್ಲಿ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ತೇಜಸ್ವಿನ್ ಶಂಕರ್, ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ದಾಖಲೆ ಬರೆದ ಮಧ್ಯಪ್ರದೇಶದ ಯುವ ಪ್ರತಿಭೆ ದೇವ್ ಮೀನಾ ಶಂಕರ್ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತಕ್ಕೆ ಮರಳಿದ ಚೋಳರ ಕಾಲದ ಕಲಾಕೃತಿ
ಇದೇ ವೇಳೆ ತಮಿಳುನಾಡಿನ ಪ್ರಸಿದ್ಧ ಚೋಳರ ರಾಜವಂಶದ ಕಾಲಕ್ಕೆ ಸೇರಿದ ಪುರಾತನ ಮತ್ತು ಅತ್ಯಂತ ಅಪರೂಪದ ಕಲಾಕೃತಿಯನ್ನು ಯಶಸ್ವಿಯಾಗಿ ಭಾರತಕ್ಕೆ ಮರಳಿ ತರಲಾಗಿದೆ ಎಂದು ತಿಳಿಸಿದರು. ಕಳೆದ ಕೆಲವು ವರ್ಷಗಳಲ್ಲಿ ಭಾರತದಿಂದ ಕಳುವಾಗಿದ್ದ ನೂರಾರು ಪವಿತ್ರ ವಿಗ್ರಹಗಳು ಮತ್ತು ಕಲಾಕೃತಿಗಳನ್ನು ಜಗತ್ತಿನ ವಿವಿಧ ದೇಶಗಳಿಂದ ಭಾರತಕ್ಕೆ ವಾಪಸ್ ತರಲಾಗುತ್ತಿದ್ದು, ಇದು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಕೆಲಸವಾಗಿದೆ ಎಂದು ಹೇಳಿದರು.
ಬೇಸಿಗೆಯ ಬಿಸಿಲ ಎಚ್ಚರಿಕೆ ನೀಡಿದ ಮೋದಿ
ದೇಶಾದ್ಯಂತ ಹೆಚ್ಚುತ್ತಿರುವ ಬಿಸಿಗಾಳಿ ಬಗ್ಗೆ ಎಚ್ಚರಿಕೆ ನೀಡಿದ ಅವರು, ಎಲ್ಲರೂ ಮುನ್ನೆಚ್ಚರಿಕೆ ವಹಿಸುವಂತೆ ಅವರು ಸಲಹೆ ನೀಡಿದ್ದಾರೆ. ಈ ಸಂದರ್ಭ ಸಾಕಷ್ಟು ನೀರು ಕುಡಿಯುವುದು, ಬಿಸಿಲಿನ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವಂತೆ ಸೂಚಿಸಿದ್ದಾರೆ. ಜೊತೆಗೆ ಬೇಸಿಗೆಯ ಬಿಸಿಲನ್ನು ನೀಗಿಸಬಲ್ಲಂತಹ ದೇಸೀ ತಂಪು ಪಾನೀಯಗಳನ್ನು ಪ್ರಸ್ತಾಪಿಸಿದರು. ಪಾನಕ, ಲಸ್ಸಿ, ಆಮ್ ರಸ್ ಇತ್ಯಾದಿ ಪಾನೀಯಗಳನ್ನು ಉದಾಹರಿಸಿದರು.



