Sunday, November 9, 2025

ನ. 11ರಂದು ಭೂತಾನ್​​ಗೆ ಪ್ರಧಾನಿ ಮೋದಿ ಪ್ರವಾಸ: ದ್ವಿಪಕ್ಷೀಯ ಪಾಲುದಾರಿಕೆ ಮತ್ತಷ್ಟು ಬಲಪಡಿಸಲು ದಿಟ್ಟ ಹೆಜ್ಜೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಭೂತಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 11 ಮತ್ತು 12ರಂದು ಭೂತಾನ್‌ಗೆ ಭೇಟಿ ನೀಡಲಿದ್ದಾರೆ.

ಈ ಸಮಯದಲ್ಲಿ ಮೋದಿ ಅವರು ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್ಚುಕ್ ಮತ್ತು ಪ್ರಧಾನಿ ತ್ಸೆರಿಂಗ್ ಟೋಬ್ಗೆ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಮತ್ತು ಭೂತಾನ್ ರಾಜ ಜಿಗ್ಮೆ ಒಟ್ಟಾಗಿ ಪುನತ್ಸಂಗ್ಚು-II ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.

ಈ ವೇಳೆ ಭೂತಾನಿನ ಮಾಜಿ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಅವರ 70ನೇ ಜನ್ಮ ದಿನಾಚರಣೆಯ ಆಚರಣೆಯಲ್ಲಿಯೂ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಮೋದಿ ಅವರು ಥಿಂಪುವಿನ ತಾಶಿಚೋಡ್‌ಜಾಂಗ್‌ನಲ್ಲಿರುವ ಪವಿತ್ರ ಅವಶೇಷಗಳಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ ಮತ್ತು ಭೂತಾನ್ ಸರ್ಕಾರ ಆಯೋಜಿಸಿರುವ ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪ್ರಧಾನಿ ಮೋದಿ ಅವರ ಭೇಟಿಯು ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ವರ್ಧಿಸುವ ಮತ್ತು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಲು, ಪರಸ್ಪರ ಆಸಕ್ತಿಯ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಎರಡೂ ಕಡೆಯವರಿಗೆ ಅವಕಾಶವನ್ನು ಒದಗಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಕೊನೆಯ ಬಾರಿಗೆ 2024ರ ಮಾರ್ಚ್‌ನಲ್ಲಿ ಭೂತಾನ್‌ಗೆ ಭೇಟಿ ನೀಡಿದ್ದರು. ಆಗ ಅವರಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವವಾದ ಆರ್ಡರ್ ಆಫ್ ದಿ ಡ್ರಕ್ ಗಯಾಲ್ಪೊ ಪ್ರಶಸ್ತಿಯನ್ನು ನೀಡಲಾಯಿತು. ಈ ಮೂಲಕ ಈ ಪ್ರಶಸ್ತಿ ಸ್ವೀಕರಿಸಿದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರೆಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದರು.

error: Content is protected !!