ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆ: ದುಬೈ ತಲುಪಿದ ಪ್ರಧಾನಿ ಮೋದಿ, ಅದ್ಧೂರಿ ಸ್ವಾಗತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವ ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ದುಬೈ ತಲುಪಿದ್ದಾರೆ. ದುಬೈ ವಿಮಾನ ನಿಲ್ದಾಣದಲ್ಲಿ ಯುಎಇ ಉಪ ಪ್ರಧಾನಿ ಶೇಖ್ ಸೈಫ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಪ್ರಧಾನಿ ಅವರನ್ನು ಸ್ವಾಗತಿಸಿದರು.

ಈ ಕುರಿತು ಮೋದಿ ಅವರು ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್​ನಲ್ಲಿ, ”ನಾನು COP-28 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದುಬೈ ತಲುಪಿದ್ದೇನೆ. ಉತ್ತಮ ಗ್ರಹವನ್ನು (ಭೂಮಿ) ನಿರ್ಮಿಸುವ ಗುರಿ ಹೊಂದಿರುವ ಶೃಂಗಸಭೆಯ ಕಾರ್ಯವೈಖರಿಯನ್ನು ಎದುರು ನೋಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಯುಎಇಗೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ದುಬೈನಲ್ಲಿರುವ ಭಾರತೀಯರು ಆತ್ಮೀಯವಾಗಿ ಸ್ವಾಗತಿಸಿದರು. ಹೋಟೆಲ್ ಹೊರಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೋದಿ, ಮೋದಿ ಎಂಬ ಘೋಷಣೆಗಳನ್ನು ಕೂಗಿದರು. ಇದರ ಜೊತೆಗೆ ‘ಈ ಬಾರಿ ಮೋದಿ ಸರ್ಕಾರ’ ಹಾಗೂ ‘ವಂದೇ ಮಾತರಂ’ ಎಂಬ ಘೋಷಣೆಗಳೂ ಕೇಳಿಬಂದವು. ‘ಅವರ ಸ್ವಾಗತದಿಂದ ನಾನು ತೀವ್ರ ಭಾವುಕನಾಗಿದ್ದೇನೆ. ಅವರ ಬೆಂಬಲ ಮತ್ತು ಉತ್ಸಾಹ ನಮ್ಮ ಸಂಸ್ಕೃತಿ ಮತ್ತು ಬಂಧಗಳಿಗೆ ಸಾಕ್ಷಿಯಾಗಿದೆ’ ಎಂದು ಪ್ರಧಾನಿ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಯುಎಇ ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆ ಸಿಒಪಿ-28ನೇ ಶೃಂಗ ಸಭೆ ನಡೆಸುತ್ತಿದೆ. ಶೃಂಗಸಭೆ ನ.30ರಿಂದ ಡಿ.12ರ ವರೆಗೆ ನಡೆಯಲಿದೆ. ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆ ಸಿಒಪಿ 28ರ ಭಾಗವಾಗಿದ್ದು, ಇದರಲ್ಲಿ ಶುಕ್ರವಾರದಂದು ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡುವ ಮತ್ತು ಹವಾಮಾನ ಬದಲಾವಣೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಮಾರ್ಗಗಳ ಕುರಿತು ಚರ್ಚಿಸಲು ಹಲವಾರು ವಿಶ್ವ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!