ಮೇ 6ರಂದು ಬೆಂಗಳೂರಿನ 17 ಕ್ಷೇತ್ರಗಳನ್ನು ಕೇಸರಿಮಯವಾಗಿಸಲಿದೆ ಮೋದಿ ರೋಡ್ ಶೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಈ ವೇಳೆ ನಾಯಕರ ದಂಡೇ ರಾಜ್ಯಕ್ಕೆ ಆಗಮಿಸಿದೆ. ಪ್ರಧಾನಿ ಮೋದಿಯವರು ಕೂಡ ರಾಜ್ಯದ ವಿವಿಧೆಡೆ ಸಂಚರಿಸಿ ಪ್ರಚಾರ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಮೇ.6ರಂದು ಮತ್ತೆ ಬೆಂಗಳೂರಿಗೆ ಆಗಮಿಸಿ ‘ನಮ್ಮ ಕರ್ನಾಟಕ ಯಾತ್ರೆ’ ಹೆಸರಿನಡಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ.

ಮಲ್ಲೇಶ್ವರ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ರೋಡ್ ಶೋ ಕುರಿತು ಸಂಸದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಮಾಹಿತಿ ನೀಡಿದರು.

17 ಕ್ಷೇತ್ರಗಳಲ್ಲಿ ರೋಡ್‌ ಶೋ

ಸಂಸದ ಪಿ.ಸಿ.ಮೋಹನ್ ಮಾತನಾಡಿ, ಕರ್ನಾಟಕದ ಜನತೆ 9 ವರ್ಷಗಳಿಂದ ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಲು ಪ್ರಧಾನಿಯವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮೇ 6ರಂದು ಪ್ರಧಾನಿಯವರು ರಾಜಧಾನಿಯ 17 ಕ್ಷೇತ್ರಗಳಲ್ಲಿ ಒಟ್ಟು 36.6 ಕಿ.ಮೀ ದೂರ ರೋಡ್ ಶೋ ನಡೆಸಲಿದ್ದಾರೆ. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ 10.1 ಕಿ.ಮೀ, ಸಂಜೆ 4ರಿಂದ ರಾತ್ರಿ 10 ರವರೆಗೆ 26.5 ಕಿ.ಮೀ ದೂರ ರೋಡ್ ಶೋ ನಡೆಯಲಿದ್ದು, ಹತ್ತು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.

ಎಲ್ಲೆಲ್ಲಿ ಸಾಗಲಿದೆ ರೋಡ್‌ ಶೋ

ಬೆಳಿಗ್ಗೆ ಸುರಂಜನ್‍ದಾಸ್ ರಸ್ತೆಯಿಂದ ಆರಂಭವಾಗುವ ಯಾತ್ರೆ, ಮಹದೇವಪುರ, ಕೆ.ಆರ್.ಪುರ, ಸಿ.ವಿ.ರಾಮನ್ ನಗರ, ಶಾಂತಿನಗರ, ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಲಿದೆ. ಸಂಜೆ ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಪದ್ಮನಾಭ ನಗರ, ಬಸವನಗುಡಿ, ಚಿಕ್ಕಪೇಟೆ, ಚಾಮರಾಜಪೇಟೆ, ಗಾಂಧಿನಗರ, ವಿಜಯನಗರ, ಗೋವಿಂದರಾಜ ನಗರ, ರಾಜಾಜಿನಗರ, ಮಹಾಲಕ್ಷ್ಮಿ ಲೇ ಔಟ್, ಮಲ್ಲೇಶ್ವರ ಕ್ಷೇತ್ರಗಳಲ್ಲಿ ರೋಡ್ ಶೋ ಸಾಗಲಿದೆ. ಇಡೀ ಕರ್ನಾಟಕದ ಜನ ರೋಡ್ ಶೋ ನಲ್ಲಿ ಪಾಲ್ಗೊಳ್ಳುತ್ತಿದ್ದು, ರೋಡ್ ಶೋ ಸಾಗುವ ಮಾರ್ಗದ ಬಗ್ಗೆ ತಿಳಿಸಲಾಗುವುದು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಮತ್ತು ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿಗೆ ಹಬ್ಬದ ದಿನ

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಪ್ರಧಾನಿಯವರು ನಮ್ಮ ಮನೆ-ಬಾಗಿಲ ಹತ್ತಿರ ಬರುತ್ತಿರುವುದು ಇಡೀ ಬೆಂಗಳೂರಿಗರು ಖುಷಿ ಪಡುವ ಹಬ್ಬವಾಗಿದೆ. ನವ ಬೆಂಗಳೂರಿಗೆ ಪ್ರಧಾನಿಯವರು ಹಾಕಿರುವ ಅಡಿಪಾಯಕ್ಕಾಗಿ ಜನರು ಅವರನ್ನು ಹೂ ಮಳೆಯೊಂದಿಗೆ ಸ್ವಾಗತಿಸಲು ಕಾತರರಾಗಿದ್ದಾರೆ ಎಂದು ನುಡಿದರು.

ಅಭಿವೃದ್ಧಿ ನೀಡಿದ ಮೋದಿ ಸರ್ಕಾರ

ಬೆಂಗಳೂರು ಬಿಜೆಪಿ ಭದ್ರಕೋಟೆಯಾಗಿದ್ದು, ಸಬರ್ಬನ್ ರೈಲು, ಉಪ ನಗರ ಟೌನ್ ಶಿಪ್ ವರ್ತುಲ ರಸ್ತೆ, ಮೆಟ್ರೋ ರೈಲು ಮಾರ್ಗ 70 ಕಿ.ಮೀಗೆ ವಿಸ್ತರಣೆ, 1,500 ಎಲೆಕ್ಟ್ರಿಕ್ ಬಸ್‍ಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ಮಿನಲ್, ಸ್ಟಾರ್‍ಟಪ್, ಯೂನಿಕಾರ್ನ್‍ಗೆ ಪ್ರೋತ್ಸಾಹ, ಪಿಎಂ ಆವಾಸ್ ಯೋಜನೆಯಡಿ 40 ಸಾವಿರ ಮನೆಗಳ ನಿರ್ಮಾಣ, ಸ್ವನಿಧಿ ಯೋಜನೆಯಡಿ ವ್ಯಾಪಾರಿಗಳಿಗೆ ಆರ್ಥಿಕ ನೆರವು, ಮೂರುವರೆ ವರ್ಷದಿಂದ ಉಚಿತ ಪಡಿತರ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ನರೇಂದ್ರ ಮೋದಿಯವರ ಸರ್ಕಾರ ನಗರಕ್ಕೆ ನೀಡಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!