ಸಿಲಿಕಾನ್ ಸಿಟಿಯಲ್ಲಿಂದು ಮೋದಿ ಮೇನಿಯಾ: ʼಇಂಧನ ಸಪ್ತಾಹʼಕ್ಕೆ ಪ್ರಧಾನಿ ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಇಂಡಿಯಾ ಎನರ್ಜಿ ವೀಕ್ 2023 ಅನ್ನು ಉದ್ಘಾಟಿಸಿದರು ಮತ್ತು ಇಂಡಿಯನ್ ಆಯಿಲ್‌ನ ವಿಶಿಷ್ಟ ಟ್ವಿನ್ ಕುಕ್​ಟಾಪ್ ಸೋಲಾರ್ ಕುಕ್ಕರ್​ ಒಂದನ್ನು ಅನಾವರಣಗೊಳಿಸಿದರು.

ಬೆಂಗಳೂರು ಉತ್ತರ ತಾಲೂಕಿನ ಮಾದಾವರ ಬಳಿ ಇರುವ ಬಿಐಇಸಿಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ
ಇಂಧನ ಉತ್ಪಾದನೆ ಮತ್ತು ವಿತರಣೆಯಲ್ಲಿ ಭಾರತವು ಇಂದು ವಿಶ್ವದ ಅತ್ಯಂತ ಮುಂದುವರಿದ ಶಕ್ತಿಗಳ ಪೈಕಿ ಒಂದಾಗಿದೆ ಎಂದರು.

ಸಮಾರಂಭದಲ್ಲಿ ಉದ್ಘಾಟನಾ ಭಾಷಣ ಮಾಡಿದ ಇಂಧನ ಸಚಿವ ಹರ್​ದೀಪ್ ಸಿಂಗ್ ಪುರಿ, “ಪರಿಸರ ಸ್ನೇಹಿ ಇಂಧನ ಬಳಕೆಗೆ ಹೊಸ ವೇಗ ನೀಡುವ ಪ್ರಯತ್ನ ಇದು. ಅಮೃತ ಕಾಲ ಮತ್ತು ವಸುಧೈವ ಕುಟುಂಬಕಂ ಆಶಯಗಳನ್ನು ಮತ್ತೊಮ್ಮೆ ವಿವರಿಸಿದರು. ಭಾರತದಲ್ಲಿ ಎಲ್ಲರಿಗೂ ಕೈಗೆಡುಕುವ ದರದಲ್ಲಿ ಇಂಧನ ಒದಗುವಂತೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. 2030ರ ಒಳಗೆ ಭಾರತದಲ್ಲಿ ವಾಯುಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಸತತ ಪರಿಶ್ರಮ ಹಾಕುತ್ತಿದೆ. ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸರ ಸ್ನೇಹಿ ಇಂಧನಕ್ಕೆ ನಾವು ಆದ್ಯತೆ ನೀಡಿದ್ದೇವೆ. ಆದರೆ ಅಭಿವೃದ್ಧಿಯ ವಿಚಾರದಲ್ಲಿ ರಾಜಿಯಾಗುತ್ತಿಲ್ಲ”. ಎಂದು ಹೇಳಿದರು.

ಹಸಿರು ಇಂಧನದ ಬಗ್ಗೆ ಬಜೆಟ್ ಭಾಷಣದಲ್ಲಿಯೂ ಪ್ರಸ್ತಾಪಿಸಲಾಗಿತ್ತು. ದೊಡ್ಡ ಮೊತ್ತದ ಅನುದಾನವನ್ನು ಈ ಕ್ಷೇತ್ರಕ್ಕೆ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಶೂನ್ಯ ಇಂಗಾಲ ಹೊರಸೂಸುವಿಕೆ ಆಶಯ ಸಾಕಾರಗೊಳಿಸಲು ನಾವು ಶ್ರಮಿಸಬೇಕಿದೆ. ಅದು ನಮ್ಮ ಆದ್ಯತೆಯಾಗಬೇಕು ಎಂದು ಸಚಿವ ಹರ್​ದೀಪ್ ಸಿಂಗ್ ಪುರಿ ತಮ್ಮ ಭಾಷಣ ಮುಗಿಸಿದರು.

ಈ ಸಂದರ್ಭದಲ್ಲಿ “ಗುಜರಾತ್ ಮುಖ್ಯಮಂತ್ರಿಯಾಗಿ ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದವರು ಮೋದಿ. ‘ನೆಟ್ ಝೀರೊ’ ಎನ್ನುವುದು ಇಡೀ ಜಗತ್ತಿನ ಎದುರು ಇರುವ ದೊಡ್ಡ ಸವಾಲು. 2047ಕ್ಕೆ ಭಾರತವು ಈ ಗುರಿ ಮುಟ್ಟಬೇಕು ಎಂದು ಪ್ರಧಾನಿ ಸೂಚಿಸಿದ್ದರು. ದೇಶವು ಈ ಗುರಿ ಮುಟ್ಟಲು ಕರ್ನಾಟಕವು ತನ್ನ ಕೊಡುಗೆ ನೀಡಲಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಾದಾವರದಲ್ಲಿರುವ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಇಂಧನ ಸಪ್ತಾಹ ಕಾರ್ಯಕ್ರಮದ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ​ಗೆಹ್ಲೋಟ್ ಉಪಸ್ಥಿತರಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ದೇಶಗಳ ಇಂಧನ ಸಚಿವರು ಪಾಲ್ಗೊಂಡಿದ್ದಾರೆ.

ಒಳಾಂಗಣ ಸೌರ ಅಡುಗೆ ವ್ಯವಸ್ಥೆ :

ಪ್ರಧಾನಿ ಮೋದಿ ಅವರು ಇಂಡಿಯನ್ ಆಯಿಲ್‌ನ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯ ಟ್ವಿನ್ ಕುಕ್​ಟಾಪ್ ಸೋಲಾರ್ ಕುಕ್ಕರ್​ ಮಾದರಿಯನ್ನು ಅನಾವರಣಗೊಳಿಸಿದರು ಮತ್ತು ಅದರ ವಾಣಿಜ್ಯ ರೋಲ್-ಔಟ್ ಅನ್ನು ಫ್ಲ್ಯಾಗ್ ಆಫ್ ಮಾಡಿದರು.

ಇಂಡಿಯನ್ ಆಯಿಲ್ ಈ ಹಿಂದೆ ಒಂದೇ ಕುಕ್‌ಟಾಪ್‌ನೊಂದಿಗೆ ನವೀನ ಮತ್ತು ಪೇಟೆಂಟ್ ಪಡೆದ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತ್ತು. ಎಲ್ಲರ ಪ್ರತಿಕ್ರಿಯೆಯ ಆಧಾರದ ಮೇಲೆ, ಅವಳಿ-ಕುಕ್‌ಟಾಪ್ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯನ್ನು ಬಳಕೆದಾರರಿಗೆ ಹೆಚ್ಚು ನಮ್ಯತೆ ಮತ್ತು ಸುಲಭವಾಗಿಸಲು ವಿನ್ಯಾಸಗೊಳಿಸಲಾಗಿದೆ. ಇದು ಕ್ರಾಂತಿಕಾರಿ ಒಳಾಂಗಣ ಸೌರ ಅಡುಗೆ ಪರಿಹಾರವಾಗಿದ್ದು, ಸೌರ ಮತ್ತು ಸಹಾಯಕ ಶಕ್ತಿ ಮೂಲಗಳೆರಡರಲ್ಲೂ ಏಕಕಾಲದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಭಾರತಕ್ಕೆ ವಿಶ್ವಾಸಾರ್ಹ ಅಡುಗೆ ಪರಿಹಾರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!