ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೋಕ್ಸೋ ಕೇಸ್‌ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಇಂದು ಸಿಐಡಿ ವಿಚಾರಣೆ ಎದುರಿಸಿದ್ದಾರೆ.
ಬೆಂಗಳೂರಿನ ಸಿಐಡಿ ಕಚೇರಿಯಲ್ಲಿಂದು ಸತತ 2 ಗಂಟೆ ವಿಚಾರಣೆ ಎದುರಿಸಿದ್ದಾರೆ. ಪ್ರಕರಣದ ತನಿಖಾಧಿಕಾರಿ ಡಿವೈಎಸ್‌ಪಿ ಪುನೀತ್ ವಿಚಾರಣೆ ನಡೆಸಿದ್ದು, ಹಲವು ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ವಿಚಾರಣೆ ಮುಗಿದ ಬಳಿಕ ಬಿಎಸ್‌ವೈ ಸಿಐಡಿ ಕಚೇರಿಯಿಂದ ದವಳಗಿರಿ ನಿವಾಸಕ್ಕೆ ತೆರಳಿದ್ದಾರೆ.
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಳೆದ ಮಾರ್ಚ್ 14ರಂದು ನೀಡಲಾಗಿದ್ದ ದೂರಿನ ಅನ್ವಯ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಸಂತ್ರಸ್ತೆಯ ತಾಯಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ವಿರುದ್ಧ ಪೋಕ್ಸೊ ಮತ್ತು 354 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಬಳಿಕ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿತ್ತು. ಪ್ರಕರಣ ಕೈಗೆತ್ತಿಕೊಂಡಿರುವ ಸಿಐಡಿ ತನಿಖಾಧಿಕಾರಿಗಳು ನೊಟೀಸ್ ಜಾರಿಗೊಳಿಸಿದ್ದರು. 41(O) ಸಿಆರ್‌ಪಿಸಿ ಅಡಿಯಲ್ಲಿ ನೊಟೀಸ್ ಜಾರಿಗೊಳಿಸಲಾಗಿತ್ತು. ಈ ನಡುವೆ ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಬೆನ್ನಲ್ಲೇ ಸರ್ಕಾರದ ವಿಶೇಷ ಅಭಿಯೋಜಕರಾಗಿ ಅಶೋಕ್ ನಾಯ್ಕ್ ಅವರನ್ನ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ನೊಟೀಸ್ ಜಾರಿಯಾದ ಒಂದು ದಿನದ ಬಳಿಕ ಬಿಎಸ್‌ವೈ ವಿರುದ್ಧವೇ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ್ದರಿಂದ ಬಂಧನಕ್ಕೆ ಸಿದ್ಧತೆ ನಡೆದಿತ್ತು. ಈ ಬೆನ್ನಲ್ಲೇ ಹೈಕೋರ್ಟ್ ಬಂಧನಕ್ಕೆ ತಡೆ ನೀಡಿತ್ತು.