ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಹೈಕೋರ್ಟ್ ಆದೇಶದಂತೆ ಪೊಕ್ಸೋ ವಿಚಾರಣೆಯನ್ನು ಮತ್ತೆ ಕೈಗೆತ್ತಿಕೊಂಡ ನ್ಯಾಯಾಲಯ, ಸಾಕ್ಷಿ ವಿಚಾರಣೆಗೆ ಆರೋಪಿ ಪರ ವಕೀಲ ಕೆ.ಬಿ.ಕೆ.ಸ್ವಾಮಿ ಎರಡು ದಿನಗಳ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಿದೆ.
ಪೋಕ್ಸೊ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಮುರುಘಾ ಶ್ರೀಗಳನ್ನು, ಶುಕ್ರವಾರ ನಗರದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಏ.29ರಂದು ಮುರುಘಾ ಶರಣರು ನ್ಯಾಯಾಲಯಕ್ಕೆ ಶರಣಾಗಿದ್ದರು. ಮುರುಘಾ ಶ್ರೀಗಳಿಗೆ (Murugha Seer) ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಏ.23ರಂದು ರದ್ದು ಮಾಡಿ, ಶರಣಾಗತಿಯಾಗುವಂತೆ ಸೂಚಿಸಿತ್ತು. ಹೀಗಾಗಿ ಶ್ರೀಗಳು ಚಿತ್ರದುರ್ಗ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಶರಣಾಗಿದ್ದರು. ಅವರಿಗೆ ಮೇ 27ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶ ಎಸ್.ಎನ್.ಕಲ್ಕಣಿ ಆದೇಶ ನೀಡಿದ್ದರು.
ಪೋಕ್ಸೋ ಕೇಸ್ ವಿಚಾರಣೆ ಮುಗಿದು ತೀರ್ಪು ಬರುವವರೆಗೂ ಮುರುಘಾ ಶ್ರೀಗಳನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿ, ಒಂದು ವಾರದೊಳಗೆ ಶರಣಾಗತಿ ಆಗುವಂತೆ ಶ್ರೀಗಳಿಗೆ ಸೂಚಿಸಿತ್ತು. ಹೀಗಾಗಿ ಶ್ರೀಗಳು ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದರು. ಮೇ 27ರಂದು ನ್ಯಾಯಾಂಗ ಬಂಧನ ಮುಗಿದ ಹಿನ್ನೆಲೆಯಲ್ಲಿ ಶ್ರೀಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ, ಪ್ರಕರಣದ ಅಧಿಕೃತ ಚಾರ್ಜ್ ಶೀಟ್ ಲಭ್ಯವಿಲ್ಲದ ಕಾರಣ ಇಂದಿಗೆ (ಮೇ 31) ವಿಚಾರಣೆ ಮುಂದೂಡಲಾಗಿತ್ತು.