ಹೊಸದಿಗಂತ ವರದಿ, ಯಲ್ಲಾಪುರ:
ವಾರೆಂಟ್ ಮೇಲೆ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಅಂತರ್ ಜಿಲ್ಲಾ ರೌಡಿಶೀಟರ್ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ತಾಲೂಕಿನ ಕಣ್ಣಿಗೇರಿ ಬಳಿ ನಡೆದಿದೆ.
ಜೊಯಿಡಾ ತಾಲೂಕಿನ ರಾಮನಗರ ರಾಮಲಿಂಗಗಲ್ಲಿಯ ಪ್ರವೀಣ ಮನೋಹರ ಸುಧೀರ ಎಂಬಾತ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ ಸೇರಿ ಒಟ್ಟು 16 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪೊಲೀಸರು ವಿಶೇಷ ತಂಡ ರಚಿಸಿ ಅವನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದರು. ಪೊಲೀಸರು ಯಲ್ಲಾಪುರ-ಹಳಿಯಾಳ ರಾಜ್ಯ ಹೆದ್ದಾರಿ ಸುತ್ತ ಕಾರ್ಯಾಚರಣೆ ನಡೆಸುತ್ತಿರುವಾಗ ಕಣ್ಣಿಗೇರಿ ಬಳಿ ಆತ ಇರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಬಂಧಿಸಲು ತೆರಳಿದ ರಾಮನಗರ ಹಾಗೂ ಜೋಯಿಡಾ ಪಿಎಸ್ಐಗಳಾದ ಮಹಾಂತೇಶ ನಾಯಕ, ಸಿಬ್ಬಂದಿ ಜಾಫರ ಅದರಗುಂಚಿ, ಅಸ್ಕಂ ಘಟ್ಟದ, ಮಲ್ಲಿಕಾಜುನ ಹೊಸಮನಿ ಅವರ ಮೇಲೆ ಪ್ರವೀಣ ಚಾಕು ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಪಿ.ಎಸ್.ಐ ಮಹಾಂತೇಶ ನಾಯಕ 2 ಸುತ್ತು ಗಾಳಿಯಲ್ಲಿ ಫೈರ್ ಮಾಡಿ ಆಪಾದಿತನಿಗೆ ಶರಣಾಗಲು ತಿಳಿಸಿದರೂ, ಆತ ಪುನಃ ಹಲ್ಲೆಗೆ ಮುಂದಾದಾಗ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿ, ಬಂಧಿಸಿದ್ದಾರೆ.
ಗಾಯಾಳು ಆರೋಪಿ ಹಾಗೂ ಗಾಯಗೊಂಡ ಪೊಲೀಸರಿಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಗೆ ಎಸ್.ಪಿ ನಾರಾಯಣ ಎಂ ಭೇಟಿ ನೀಡಿ ಗಾಯಾಳು ಪೊಲೀಸರ ಆರೋಗ್ಯ ವಿಚಾರಿಸಿದರು. ಘಟನೆ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ಜಗದೀಶ, ಡಿ.ಎಸ್.ಪಿಗಳಾದ ಗೀತಾ ಪಾಟೀಲ್, ಶಿವಾನಂದ ಮದರಖಂಡಿ ಇತರರಿದ್ದರು.