ಹೊಸದಿಗಂತ ವರದಿ, ಗೋಕರ್ಣ:
ವಿದೇಶಿಯರೂ ಸೇರಿದಂತೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ಪುಣ್ಯಕ್ಷೇತ್ರ, ಪ್ರವಾಸಿ ತಾಣ ಗೋಕರ್ಣದಲ್ಲಿ ಸುರಕ್ಷತೆಗೆ ಪೊಲೀಸ್ ಇಲಾಖೆ ಆದ್ಯತೆ ನೀಡುತ್ತಿದ್ದು ಡಿಜಿಟಲ್ ತಂತ್ರಜ್ಞಾನದ ಬಳಕೆಯೊಂದಿಗೆ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ಅವರು ಹೇಳಿದರು.
ಪೊಲೀಸ್ ಇಲಾಖೆ ವತಿಯಿಂದ ಸ್ಥಾಪಿಸಿದ ಪ್ರವಾಸಿಗರ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಗೋಕರ್ಣದಲ್ಲಿ ರೆಸಾರ್ಟ್, ವಸತಿಗೃಹ, ವಾಣಿಜ್ಯ,ವಹಿವಾಟು ನಡೆಯುವ ಸ್ಥಳಗಳಲ್ಲಿ ಸಿ.ಸಿ ಟಿ.ವಿ ಅಳವಡಿಸಲು ಈಗಾಗಲೇ ಸೂಚನೆ ನೀಡಲಾಗಿದ್ದು ಸುಮಾರು 500 ಕಡೆಗಳಲ್ಲಿ ಸಿ.ಸಿ ಟಿವಿ ಅಳವಡಿಸಲಾಗಿದೆ ಇನ್ನಷ್ಟು ಕಡೆಗಳಲ್ಲಿ ಸಿ.ಸಿ ಟಿ.ವಿ ಅಳವಡಿಸಲು ಕ್ರಮಗಳನ್ನು ಕೈಗೊಳ್ಳುವುದು ಗೋಕರ್ಣದಲ್ಲಿ ಯಾವುದೇ ರೀತಿಯ ಅಪರಾಧ ಕೃತ್ಯಗಳು,ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಕಣ್ಣಿಡುವ ಕೆಲಸ ಮಾಡುತ್ತಿದೆ ಎಂದರು.
ಗೋಕರ್ಣದ ಕಡಲ ತೀರಗಳ ಸಮೀಪ 5 ಕಡೆಗಳಲ್ಲಿ ಪೊಲೀಸ್ ಚೌಕಿಗಳನ್ನು ನಿರ್ಮಿಸಿ ಅಪಾಯಕಾರಿ ಕಡಲಿಗೆ ಇಳಿಯದಂತೆ ಪ್ರವಾಸಿಗರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ. ಪ್ರಮುಖ ಕಡಲ ತೀರಗಳಲ್ಲಿ ಸಿ.ಸಿ ಟಿವಿ ಅಳವಡಿಸುವ ಮೂಲಕ ಪ್ರವಾಸಿಗರ ಚಲನವಲನಗಳ ಮೇಲೆ ಕಣ್ಣಿಡುವ ಕೆಲಸ ಮಾಡುತ್ತಿದ್ದೇವೆ ಎಂದ ಅವರು ಗೋಕರ್ಣದಲ್ಲಿ ವಿದೇಶಿ ಪ್ರವಾಸಿಗರಿಗೆ ಅನುಕೂಲ ಒದಗಿಸುತ್ತಿದ್ದ ಮಾಹಿತಿ ಕೆಂದ್ರವನ್ನು ಸುಮಾರು 20 ವರ್ಷಗಳ ಹಿಂದೆ ಮುಚ್ಚಲಾಗಿತ್ತು ಇದೀಗ ಮತ್ತೊಮ್ಮೆ ಮಾಹಿತಿ ಕೇಂದ್ರ ತೆರೆಯಲಾಗಿದ್ದು ಇಲ್ಲಿ ಸುಮಾರು 33 ಪ್ರಮುಖ ತಾಣಗಳ ಸಿ.ಸಿ.ಟಿ.ವಿ ದೃಶ್ಯಗಳ ಸಂಪರ್ಕ ನೀಡಲಾಗಿದೆ. ಪ್ರವಾಸಿಗರು ಸಹಾಯ ಕೆಂದ್ರವನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಮತ್ತು ಸಹಾಯ ಪಡೆಯಬಹುದು ಎಂದು ತಿಳಿಸಿದರು.
ಸ್ಥಳೀಯ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.