ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ಟೆಬಲ್ ಹಾಗೂ ಕಾನ್ ಸ್ಟೆಬಲ್ಗಳು ಈಗಲೂ ಬ್ರಿಟಿಷ್ ಕಾಲದ ಟೋಪಿಯನ್ನು ಧರಿಸುತ್ತಾರೆ. ಈ ಟೋಪಿ ಬದಲಿಸುವ ಪೊಲೀಸರ ಬೇಡಿಕೆ ಬಹುವರ್ಷಗಳದ್ದು. ಇದೀಗ ಸಮಯ ಬಂದಿದ್ದು, ದೊಡ್ಡ ಟೋಪಿ ಬದಲಾಗಿ ಸ್ಮಾರ್ಟ್ ಪೀಕ್ ಹ್ಯಾಟ್ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಅನಾದಿ ಕಾಲದಿಂದಲೂ ಬಳಸಿಕೊಂಡು ಬರುತ್ತಿರುವ ಟೋಪಿಯಿಂದ ಸಮಸ್ಯೆ ಜಾಸ್ತಿ ಎನ್ನಲಾಗುತ್ತಿದೆ. ಅಲ್ಲದೇ ಪ್ರಸ್ತುತ ಪೊಲೀಸ್ ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ಗ್ಲೋಚ್ ಟೋಪಿಯಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳ ಬಗ್ಗೆ ಇತ್ತೀಚೆಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿತ್ತು.
ಇದೀಗ ಸ್ಮಾರ್ಟ್ ಪೀಕ್ ಹ್ಯಾಟ್ ನೀಡುವ ಕುರಿತಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಡಿಜಿ-ಐಜಿಪಿ ಡಾ.ಅಲೋಕ್ ಮೋಹನ್ ಸೂಚಿಸಿದ್ದಾರೆ. ಪೀಕ್ ಟೋಪಿ ವಿತರಣೆ ಬಗ್ಗೆ ಚರ್ಚಿಸಲು ರಾಜ್ಯ ಸಶಸ್ತ್ರ ಮೀಸಲು ಪಡೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಏಪ್ರಿಲ್ 4ರಂದು ಕಿಟ್ ನಿರ್ದಿಷ್ಟತಾ ಸಮಿತಿ ಸಭೆ ಕೂಡ ಕರೆಯಲಾಗಿದೆ