ಹೊಸ ದಿಗಂತ ವರದಿ, ಮಂಡ್ಯ:
ದೇಶದ ಸುರಕ್ಷತೆಯಿಂದ ಸೈನಿಕ ಗಡಿಯಲ್ಲಿ ನಿಂತು ರಕ್ಷಣೆಯಲ್ಲಿ ತೊಡಗಿದ್ದರೆ ಆಂತರಿಕ ಭದ್ರತೆಯಲ್ಲಿ ಆರಕ್ಷಕ ಇಲಾಖೆ ತೊಡಗಿದೆ ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಹಳೇಬೂದನೂರು ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಪೊಲೀಸ್ ಅಧಿಕಾರಿಗಳಿಗೆ ನೀಡುವ ರಾಷ್ಟ್ರಪತಿಗಳ ಶ್ಲಾಘನೀಯ ಪದಕ ಪಡೆದ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ, ಬೆಂಗಳೂರು ಸಿಐಡಿ ಡಿವೈಎಸ್ಪಿ ಬಿ.ಕೆ.ಶೇಖರ್ ಅವರಿಗೆ ಅಭಿನಂದನೆ ಸಲ್ಲಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಹಗಲು-ರಾತ್ರಿ ಎನ್ನದೆ ಪೊಲೀಸ್ ಇಲಾಖೆಯವರು ಕೆಲಸ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ರಾಜ್ಯದ ಪೊಲೀಸ್ ಇಲಾಖೆ ಒಳ್ಳೆಯ ಹೆಸರು ಪಡೆದುಕೊಂಡಿದೆ. ಇಲಾಖೆಯಲ್ಲಿ ಜೀವಮಾನ ಸಾಧನೆ ಮಾಡಿದವರಿಗೆ ಕೊಡುವ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಪದಕ ಪಡೆದಿರುವ ಇಬ್ಬರಿಗೂ ಅಭಿನಂದನೆ ಸಲ್ಲಿಸಿದರು.
ರವಿಕಾಂತೇಗೌಡರು ಆಧ್ಯಾತ್ಮಿಕವನ್ನು ಮೈಗೂಡಿಸಿಕೊಂಡು ವಿಜ್ಞಾನ-ತಂತ್ರಜ್ಞಾನವನ್ನು ತನ್ನೊಳಗೆ ಅಳವಡಿಸಿಕೊಂಡಿದ್ದಾರೆ. ಅದೇ ರೀತಿ ಶೇಖರ್ ಅವರೂ ಕೂಡ ಎಷ್ಟೇ ಒತ್ತಡ-ಕಷ್ಟವಿದ್ದರೂ ಕರ್ತವ್ಯದ ಕರೆಗೆ ಓಗೊಟ್ಟು ನೊಂದವರಿಗೆ ಸಾಂತ್ವನ ಹೇಳುವ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ ಎಂದರು.