ಹೊಸದಿಗಂತ ವರದಿ ಹಾವೇರಿ:
ಪೊಲೀಸರು ಕಾರ್ಯ ದಕ್ಷತೆ, ಕರ್ತವ್ಯ ಪ್ರಜ್ಞೆಯನ್ನು ನಾವುಗಳು ಸ್ಮರಿಸಬೇಕಾಗಿದೆ ಎಂದು ಜಿಪಂ ಸಿಒ ಅಕ್ಷಯ ಶ್ರೀಧರ ಹೇಳಿದರು.
ನಗರದ ಕೆರಿಮತ್ತಿಹಳ್ಳಿಯಲ್ಲಿ ನಡೆದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹುತಾತ್ಮ ಪೊಲೀಸರಿಗೆ ಪುಷ್ಪ ಗೌರವ ಸಲ್ಲಿಸಿ ಮಾತನಾಡಿ, ನಮ್ಮ ಮತ್ತು ಸಮಾಜದ ಒಳಿತಿಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಾ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು. ಬಿಸಿಲು, ಮಳೆ, ಚಳಿ, ಗಾಳಿ, ಹಗಲು- ರಾತ್ರಿ ಯಾವುದನ್ನು ಲೆಕ್ಕಿದೇ ಹಬ್ಬ- ಹರಿದಿನ ಮರೆತು, ಅಹಿತಕರ ಘಟನೆ ಆಗದಂತೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಪೊಲೀಸರಿಗೆ ದೈಹಿಕ ಆರೋಗ್ಯ ಅತೀ ಅವಶ್ಯಕ. ಅರೊಗ್ಯ ಸರಿ ಇದ್ದರೆ ಮಾತ್ರ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯ. ಹೀಗಾಗಿ ದೈಹಿಕ ಸಾಮರ್ಥ್ಯದ ಕಡೆಗೆ ಗಮನ ಹರಿಸುವಂತೆ ಸಲಹೆ ಮಾಡಿದರು.
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ನಿರಂತರವಾಗಿ ಸಾರ್ವಜನಿಕರಿಗಾಯೇ ದುಡಿಯುತ್ತಿರುತ್ತಾರೆ ಹೀಗಾಗಿ ಅವರ ಕುಟುಂಬಗಳ ಕಡೆದು ಗಮನ ಕೊಡುವುದು ಅತೀ ಅವಶ್ಯಕ. ತಮ್ಮ ತಮ್ಮ ಕುಟುಂಬಗಳ ರಕ್ಷಣೆಗೆ ವಿಮಾದಂತಹ ಸೌಲಭ್ಯಗಳನ್ನು ಮಾಡಿಸಿಕೊಳ್ಳುವುದು ಅಗತ್ಯ. ಜಿಲ್ಲೆಯ ಪೊಲೀಸ್ ಇಲಾಖೆ ಶೇ.100ರಷ್ಟು ವಿಮಾ ಸೌಲಭ್ಯವನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.
ಎಸ್ಪಿ ಅಂಶುಕುಮಾರ ಮಾತನಾಡಿ, 1959ರ ಅ. 21ರಂದು ಚೀನಾ-ಭಾರತ ಗಡಿ ಭಾಗದದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾಗ ದಾಳಿ ನಡೆದು, ವಿಚಲಿತರಾಗದೆ ತಮ್ಮ ಪ್ರಾಣದ ಹಂಗು ತೊರೆದು ಕೊನೆಯುಸಿರೆಳೆದ 10 ಭಾರತೀಯ ಪೊಲೀಸ್ ಯೋಧರ ಬಲಿದಾನದ ಸ್ಮರಣೆಗೆ ಪ್ರತಿ ವರ್ಷ ಅ.21ರಂದು ದೇಶಾದ್ಯಂತ ಎಲ್ಲ ಜಿಲ್ಲಾ ಪೊಲೀಸ್ ಕೇಂದ್ರಗಳಲ್ಲಿ ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸುತ್ತಿರುವಾಗ ಮೃತಪಟ್ಟವರ ಸ್ಮರಣಾರ್ಥಕವಾಗಿ ಇಡೀ ದೇಶಾಧ್ಯಂತ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 2023 ಸೆ.1ರಿಂದ 2024 ಆ.31 ರವರೆಗೆ ಕರ್ನಾಟಕ ರಾಜ್ಯದಲ್ಲಿ ಒಟ್ಟು 05 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಕರ್ತವ್ಯದಲ್ಲಿ ನಿರತವಾಗಿದ್ದಾಗಲೇ ಮರಣ ಹೊಂದಿದ್ದು, ಒಟ್ಟು ನಮ್ಮ ದೇಶದಲ್ಲಿ 216 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಈ ವರ್ಷದಲ್ಲಿ ಮರಣ ಹೊಂದಿರುತ್ತಾರೆ ಎಂದು ಮಾಹಿತಿ ನೀಡಿದರು.
ಈ ವೇಳೆ ಆರ್ ಪಿಐ ಶಂಕರಗೌಡ ಪಾಟೀಲ ನೇತ್ರತ್ವದಲ್ಲಿ ಹುತಾತ್ಮ ಸಿಬ್ಬಂದಿಗೆ ತುಪಾಕಿ ಸಿಡಿಸಿ, ಪಥ ಸಂಚಲನ ಗೌರವ ಸಲ್ಲಿಸಲಾಯಿತು. ಈ ವೇಳೆ ಹೆಚ್ಚುವರಿ ಎಸ್ಪಿ
ಲಕ್ಷ್ಮಣ ಶಿರಕೋಳ ಸೇರಿದಂತೆ ಜಿಲ್ಲಾಮಟ್ಟದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.