ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಮೇಲಾದ ಅತ್ಯಾಚಾರ ನಡೆಸಿದ ನಾಲ್ವರ ವಿರುದ್ಧ ದೂರು ದಾಖಲಿಸಲು ಹೋದ 13 ವರ್ಷದ ಬಾಲಕಿಯೊಬ್ಬಳ ಮೇಲೆ ಪೋಲೀಸ್ ಅಧಿಕಾರಿ ಮತ್ತೊಮ್ಮೆ ಅತ್ಯಾಚಾರ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಈ ಕುರಿತು ಮಕ್ಕಳ ಸಹಾಯವಾಣಿ ತಂಡದವರ ಬಳಿ ಬಾಲಕಿಯು ತನ್ನ ನೋವನ್ನು ಹೇಳಿಕೊಂಡಿದ್ದು ಪೋಲೀಸರು ಎಸ್‌ಎಚ್‌ಒ ಮತ್ತು ಆಕೆಯ ಚಿಕ್ಕಮ್ಮ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಸ್‌ಎಚ್‌ಒ ಅವರನ್ನು ಅಮಾನತುಗೊಳಿಸಲಾಗಿದೆ.
ಮೂಲಗಳ ಪ್ರಕಾರ ಏಪ್ರಿಲ್ 22 ರಂದು ನಾಲ್ವರು ಸ್ಥಳೀಯ ಪುರುಷರು ತನ್ನ ಮಗಳನ್ನು ಅಪಹರಿಸಿ ಭೋಪಾಲ್‌ಗೆ ಕರೆದೊಯ್ದಿದ್ದಾರೆ ಎಂದು ಬಾಲಕಿಯ ತಾಯಿ ದೂರು ನೀಡಿದ್ದಾರೆ. ಅವರು ಮೂರು ದಿನಗಳ ಕಾಲ ಭೋಪಾಲ್‌ನಲ್ಲಿ ತಂಗಿದ್ದರು ಮತ್ತು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ..ಏಪ್ರಿಲ್ 26 ರಂದು ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬಾಲಕಿಯನ್ನು ಬಿಟ್ಟು ಹೋಗಿದ್ದರು. ನಂತರ ಸಂತ್ರಸ್ತೆಯನ್ನು ಆಕೆಯ ಚಿಕ್ಕಮ್ಮನಿಗೆ ಒಪ್ಪಿಸಲಾಯಿತು. ಮರುದಿನ ಪೊಲೀಸರು ಬಾಲಕಿಯನ್ನು ಠಾಣೆಗೆ ಕರೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅದೇ ದಿನ ಸಂಜೆ ಬಾಲಕಿಯ ಚಿಕ್ಕಮ್ಮ ಆಕೆಯನ್ನು ಠಾಣೆಯ ಗೃಹ ಅಧಿಕಾರಿಯ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.