ಹೊಸದಿಗಂತ ವರದಿ ಉಳ್ಳಾಲ:
ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರು ಈಗ ಚಿನ್ನಾಭರಣ ಕಳ್ಳತನದ ಆರೋಪ ಎದುರಿಸುತ್ತಿದ್ದು, ಈ ಬಗ್ಗೆ ದೂರು ದಾಖಲಾಗಿದೆ.
ಭ್ರಷ್ಟಾಚಾರದ ಆರೋಪ ಹೊತ್ತು ಉಳ್ಳಾಲ ಠಾಣೆಯಿಂದ ಎತ್ತಂಗಡಿಯಾದ ಇನ್‌ಸ್ಪೆಕ್ಟರ್ ಎಚ್.ಎನ್. ಬಾಲಕೃಷ್ಣ ಅವರನ್ನು ಪಾಂಡೇಶ್ವರ ಮಹಿಳಾ ಠಾಣೆಗೆ ನಿಯೋಜಿಸಲಾಗಿದೆ. ಈ ಅಧಿಕಾರಿಗೆ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ ನೆಪದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ದೊರೆತಿದೆ. ಬಾಲಕೃಷ್ಣರ ಭ್ರಷ್ಟಾಚಾರದಿಂದ ಬೇಸತ್ತ ಮಹಿಳೆಯೊಬ್ಬರು ಕಳವು ಪ್ರಕರಣವೊಂದರಲ್ಲಿ ತನ್ನ ಮಗನ ಮೈಮೇಲಿನ 50 ಗ್ರಾಮ್ ಚಿನ್ನಾಭರಣ ಎಗರಿಸಿದ್ದಾರೆಂದು ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ನಾಯಕ್ ರಿಗೆ ದೂರು ನೀಡಿದ್ದಾರೆ.
2024ರ ಜೂನ್ 29ರಂದು ಉಳ್ಳಾಲದಲ್ಲಿ 65 ವರ್ಷದ ವ್ಯಕ್ತಿಯೊಬ್ಬರು ತನ್ನ ಮನೆಯಿಂದ 15 ಲಕ್ಷ ಬೆಲೆಯ 32 ಪವನ್ ಚಿನ್ನಾಭರಣ ಕಳವಾದ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಅಂದಿನ ಇನ್‌ಸ್ಪೆಕ್ಟರ್ ಬಾಲಕೃಷ್ಣ ದೂರು ನೀಡಿದ ವ್ಯಕ್ತಿಯ ಪುತ್ರ ಪಿಯುಸಿ ವಿದ್ಯಾರ್ಥಿ ಸೇರಿ ಇಬ್ಬರು ಅಪ್ರಾಪ್ತರು ಮತ್ತು ಆತನ ಮೂವರು ಗೆಳೆಯರು (೨೦-೨೪ ವರ್ಷದ ಯುವಕರು) ಸೇರಿ ಐವರು ಮಾಡಿದ ಕಳವು ಕೃತ್ಯವೆಂದು ಪತ್ತೆಹಚ್ಚಿದ್ದರು. ಅಲ್ಲದೆ, ನಗರದ ಜುವೆಲ್ಲರಿಗಳಿಗೆ ಮಾರಾಟ ಮಾಡಿದ್ದ ಚಿನ್ನಾಭರಣವನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು.
ನ್ಯಾಯ ಕೊಡಿಸುವಂತೆ ಎಸಿಪಿಗೆ ದೂರು
ಈ ನಡುವೆ, ಕಳೆದ ಮಾರ್ಚ್ 13 ರಂದು ಸದ್ರಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಬೆಳ್ತಂಗಡಿ ಮೂಲದ ಯುವಕನೊಬ್ಬನ ತಾಯಿ, ಉಳ್ಳಾಲ ಠಾಣೆಯಲ್ಲಿದ್ದಾಗ ಬಾಲಕೃಷ್ಣ ಮಾಡಿದ್ದ ಭ್ರಷ್ಟಾಚಾರ ಮತ್ತು ವಂಚನೆಯ ಬಗ್ಗೆ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ರಿಗೆ ದೂರು ನೀಡಿದ್ದಾರೆ. ಕಳವು ಪ್ರಕರಣದಲ್ಲಿ ಸಹಕರಿಸಿದ್ದಾನೆಂದು ನನ್ನ ಮಗನನ್ನು ಉಳ್ಳಾಲ ಪೊಲೀಸರು 2024ರ ಜೂನ್ ಕೊನೆಯಲ್ಲಿ ವಶಕ್ಕೆ ಪಡೆದಿದ್ದರು. ಈ ಸಂಬಂಧ ಮಾತನಾಡಲೆಂದು ನನ್ನನ್ನು ಮರುದಿವಸ ಉಳ್ಳಾಲ ಠಾಣೆಗೆ ಕರೆಸಿಕೊಂಡಿದ್ದರು. ಪ್ರಕರಣದಲ್ಲಿ ಕಳವಾದ ಚಿನ್ನದ ರಿಕವರಿ ಆಗಬೇಕಿದೆ ಎಂದು ಹೇಳಿ, ಪ್ರಕರಣ ಮುಚ್ಚಿ ಹಾಕಲು 3 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಜುಲೈ 1ರಂದು ಉಳ್ಳಾಲ ಠಾಣೆಯಲ್ಲೇ ಅವರಿಗೆ ಹಣವನ್ನು ನೀಡಿರುತ್ತೇನೆ.
ಹಣ ಪಡೆದರೂ ಎಫ್ ಐಆರ್ ಮಾಡಿ ನನ್ನ ಮಗನನ್ನು ಆರೋಪಿಯಾಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ, ಮಗನ ಮೈಯಲ್ಲಿದ್ದ ಬಂಗಾರದ ಸರ, ಒಂದು ಬ್ರಾಸ್ಲೇಟ್, ಒಂದು ಕಡಗ, ಮೂರು ಉಂಗುರ, ಒಂದು ಕಿವಿಯ ಓಲೆ ಸೇರಿ ಒಟ್ಟು 50 ಗ್ರಾಮ್ ಚಿನ್ನವನ್ನು ವಶಕ್ಕೆ ಪಡೆದಿದ್ದರು. ಇದರ ಲೆಕ್ಕವನ್ನು ಚಾರ್ಜ್ ಶೀಟ್ ನಲ್ಲಿ ಹಾಕುತ್ತೇನೆ, ಆಮೇಲೆ ರಿಕವರಿ ಮಾಡಿಕೊಳ್ಳಬಹುದು ಎಂದಿದ್ದರು. ಆದರೆ ಈಗ ಕೋರ್ಟಿಗೆ ಸಲ್ಲಿಸಿರುವ ಚಾರ್ಜ್ ಶೀಟಿನಲ್ಲಿ ನನ್ನ ಮಗನ ಮೈಮೇಲಿದ್ದ ಚಿನ್ನಾಭರಣದ ಬಗ್ಗೆ ಉಲ್ಲೇಖಿಸದೇ ಇರುವುದು ತಿಳಿದು ಬಂದಿದೆ. ಇನ್‌ಸ್ಪೆಕ್ಟರ್ ಬಾಲಕೃಷ್ಣ ಅವರು 3 ಲಕ್ಷ ನಗದು ಮತ್ತು 50 ಗ್ರಾಮ್ ಚಿನ್ನವನ್ನು ಮೋಸದಿಂದ ಪಡೆದಿದ್ದು, ಮಗನಿಂದ ಖಾಲಿ ಕಾಗದಗಳಿಗೆ ಸಹಿ ಮಾಡಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಸಿಪಿ ಧನ್ಯಾ ನಾಯಕ್ ರಿಗೆ ಆರೋಪಿ ಯುವಕನ ತಾಯಿ ಲಿಖಿತ ದೂರು ನೀಡಿದ್ದಾರೆ.