ಹೊಸದಿಗಂತ ವರದಿ, ಮಡಿಕೇರಿ:
ಜಿಲ್ಲೆಯ ಸೋಮವಾರಪೇಟೆ ಮತ್ತು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ, ಸರಬರಾಜು ಮಾಡುತ್ತಿದ್ದ ಐವರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮಾದಾಪುರದ ಆಕಾಶ್.ಎಂ.ಸಿ, (21), ಮಡಿಕೇರಿ ಹೊಸಬಡಾವಣೆಯ ತ್ರಿಶೂಲ್.ಪಿ.ಎಲ್ (20), ಮಡಿಕೇರಿ ಮಂಗಳಾದೇವಿ ನಗರದ ನಿತ್ಯಾ.ಎಂ.ಸಿ(20), ಸುಳ್ಯ ತಾಲೂಕಿನ ಜಾಲ್ಸೂರಿನ ಧನುಷ್.ಕೆ.ಆರ್, (22), ಕೊಡ್ಲಿಪೇಟೆಯ ಶಾಂತಾಪುರದ ಭರತ್.ಕೆ.ಎಂ(28) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 1 ಕೆ.ಜಿ 628 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಅವರುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಬರುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಮತ್ತು ನಿಷೇಧಿತ ಮಾದಕ ವಸ್ತುಗಳ ಮಾರಾಟ/ಸರಬರಾಜು/ ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ವಿಶೇಷ ತಂಡಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ಅವರು ಹೇಳಿದ್ದಾರೆ.
ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪುರದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ಸೇವನೆ ಕುರಿತು ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಫೆ.1ರಂದು ದಾಳಿ ನಡೆಸಿದ 4 ಜನರನ್ನು ಹಾಗೂ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡ್ಲಿಪೇಟೆಯಲ್ಲಿ ಫೆ.2ರಂದು ದಾಳಿ ನಡೆಸಿ ಓರ್ವನನ್ನು ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಉಪ ವಿಭಾಗದ ಡಿಎಸ್ಪಿ ಚಂದ್ರಶೇಖರ್.ಪಿ, ಶನಿವಾರಸಂತೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್, ಪಿಎಸ್ಐ ಚಂದ್ರ ಹೆಚ್.ವೈ, ಗೋವಿಂದರಾಜು ಹೆಚ್.ಸಿ., ಕೃಷ್ಣರಾಜು.ಜಿ, ಮಡಿಕೇರಿ ನಗರ ವೃತ್ತ ನಿರೀಕ್ಷಕ ರಾಜು.ಪಿ.ಕೆ ಮತ್ತು ಅಪರಾಧ ಪತ್ತೆ ಸಿಬ್ಬಂದಿಗಳು, ಸುಂಟಿಕೊಪ್ಪ ಪಿಎಸ್ಐ ಮೋಹನ್ ರಾಜು.ಪಿ ಮತ್ತು ಅಪರಾಧ ಪತ್ತೆ ಸಿಬ್ಬಂದಿಗಳು, ಸೋಮವಾರಪೇಟೆ ಠಾಣೆಯ ಪಿಎಸ್ಐ ಗೋಪಾಲ.ಎಂ.ಎ ಮತ್ತು ಅಪರಾಧ ಪತ್ತೆ ಸಿಬ್ಬಂದಿಗಳು, ಡಿಸಿಆರ್ ಬಿಯ ಹೆಚ್.ಸಿಗಳಾದ ಯೋಗೇಶ್, ನಿರಂಜನ್ ಅವರುಗಳು ಭಾಗವಹಿಸಿದ್ದು, ಅವರುಗಳ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ.ಆರ್.ಎನ್ ಅವರು ಶ್ಲಾಘಿಸಿದ್ದಾರೆ.



