ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ಅಪಘಾತ ದಿನೇ ದಿನೇ ಹೆಚ್ಚುತ್ತಿದ್ದು, ಹೀಗಾಗಿ ದ್ವಿ-ಚಕ್ರ ವಾಹನ ಸವಾರರಿಗೆ ಗರಿಷ್ಠ ರಕ್ಷಣೆಗಾಗಿ ಐಎಸ್ಐ ಪ್ರಮಾಣೀಕೃತ ಫುಲ್ ಸೈಜ್ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಆದರೆ ಹೊಸ ನಿಯಮ ಜಾರಿ ನಂತರವೂ ಇನ್ನು ಹಲವಾರು ದ್ವಿ-ಚಕ್ರ ವಾಹನ ಬಳಕೆದಾರರೂ ಕಾನೂನು ಬಾಹಿರವಾಗಿರುವ ಹಾಫ್ ಹೆಲ್ಮೆಟ್ ಬಳಕೆ ಮಾಡುತ್ತಿದ್ದಾರೆ.
ಹೀಗಾಗಿ ಹಾಫ್ ಹೆಲ್ಮೆಟ್ ಬಳಕೆದಾರರ ವಿರುದ್ದ ವಿಶೇಷ ಕಾರ್ಯಾಚರಣೆ ಆರಂಭಿಸಿರುವ ನಮ್ಮ ಬೆಂಗಳೂರಿನ ಸಂಚಾರಿ ಪೊಲೀಸರು ಅಸುರಕ್ಷಿತ ಹಾಫ್ ಹೆಲ್ಮೆಟ್ ಬಳಕೆ ಮಾಡುತ್ತಿರುವುವರಿಗೆ ದಂಡ ವಿಧಿಸುತ್ತಿದ್ದಾರೆ.
ಬೆಂಗಳೂರಿನ ಆರ್ ಟಿ ನಗರದ ಸಂಚಾರಿ ಪೊಲೀಸರು ಹಾಫ್ ಹೆಲ್ಮೆಟ್ ಬಳಕೆದಾರರ ವಿರುದ್ದ ಕಾರ್ಯಾಚರಣೆ ಆರಂಭಿಸಿ ಪೊಲೀಸ್ ಸಿಬ್ಬಂದಿಯಿಂದಲೂ ದಂಡ ವಸೂಲಿ ಮಾಡಿದ್ದಾರೆ.
ಸಂಚಾರಿ ಪೊಲೀಸರ ಈ ಕ್ರಮವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಹಾಫ್ ಹೆಲ್ಮೆಟ್ ಹಾಕಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ದಂಡವಿಧಿಸಿರುವುದನ್ನು ಆರ್ ಟಿ ನಗರದ ಸಂಚಾರಿ ಪೊಲೀಸರು ಫೋಟೋ ಸಮೇತ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಪೊಲೀಸರು ಕ್ರಮಕ್ಕೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.