ಹೊಸದಿಗಂತ ವರದಿ ಸುಳ್ಯ:
ಮಂಗಳವಾರ ಸಂಜೆ ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದ ಚಾಮುಂಡಿ ಮೂಲೆ ಎಂಬಲ್ಲಿ, ಜಾನುವಾರನ್ನು ವಧೆ ಮಾಡಿ ಮಾಂಸ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ನಡೆಸಿ ಮಾಂಸ ಹಾಗೂ ಜೀವಂತ ಗೋವುಗಳನ್ನು ವಶಕ್ಕೆ ಪಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸುಬ್ರಹ್ಮಣ್ಯ ಪೊಲೀಸ್ ಉಪ-ನಿರೀಕ್ಷಕ ಕಾರ್ತಿಕ್ ಕೆ ನೇತೃತ್ವದಲ್ಲಿ ಸುಬ್ರಹ್ಮಣ್ಯ ಪೊಲೀಸರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋದಾಗ, ಅಲ್ಲಿದ್ದ ಶೆಡ್ ನಲ್ಲಿ ವ್ಯಕ್ತಿಯೋರ್ವ ಕತ್ತಿಯಿಂದ ಮಾಂಸ ಕತ್ತರಿಸುತ್ತಿದ್ದು, ಆತನೊಂದಿಗಿದ್ದ ಮೂವರು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ.
ಸ್ಥಳದಲ್ಲಿದ್ದ ವ್ಯಕ್ತಿಯನ್ನು ವಿಚಾರಿಸಲಾಗಿದ್ದು ಆತನು ಕಡಬ ಗ್ರಾಮದ ನಿವಾಸಿ ಹಮೀದ್ (45) ಎಂಬುದಾಗಿ ಹಾಗೂ ಪರಾರಿಯಾದವರು ಮುಸ್ತಾಫ, ಶರೀಫ್, ಜುಬೇರ್ ಎಂಬುದಾಗಿ ತಿಳಿಸಿದ್ದಾನೆ. ಸ್ಥಳವನ್ನು ಪರಿಶೀಲಿಸಿದಾಗ, ಒಟ್ಟು 102.5 ಕೆ ಜಿ ಜಾನುವಾರು ಮಾಂಸ ಹಾಗೂ ಜಾನುವಾರಿನ ಅಂಗಾಂಗಗಳು, ಜಾನುವಾರು ತ್ಯಾಜ್ಯ ಹಾಗೂ ಮಾಂಸ ಕತ್ತರಿಸಲು ಬಳಸಿದ ಕತ್ತಿ, ತೂಕದ ಯಂತ್ರ ಹಾಗೂ ಇತರೆ ಸೊತ್ತುಗಳು ಕಂಡುಬಂದಿದೆ.
ಆರೋಪಿ ವಧೆ ಮಾಡುವ ಉದ್ದೇಶದಿಂದ ಅಲ್ಲಿಗೆ ತಂದಿದ್ದ ಮೂರು ಜಾನುವಾರುಗಳು ಹಾಗೂ ಆರೋಪಿಗಳು ಕೃತ್ಯಕ್ಕೆ ಬಳಸಿದ ಒಂದು ಕಾರು ಹಾಗೂ ಒಂದು ದ್ವಿಚಕ್ರವಾಹನ ಸ್ಥಳದಲ್ಲಿದ್ದು, ಸದ್ರಿ ಜಾನುವಾರುಗಳನ್ನು ಹಾಗು ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು, ಆರೋಪಿಗಳ ವಿರುದ್ಧ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋ ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

