ಹೊಸದಿಗಂತ , ಬೆಳಗಾವಿ:
ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು ಹನ್ನೆರೆಡು ಲಕ್ಷ ರೂ. ಮೌಲ್ಯದ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡ ಘಟನೆ ಶನಿವಾರ ಬೆಳಿಗ್ಗೆ ಬೆಳಗಾವಿ ತಾಲೂಕಿನ ಸೋನಟ್ಟಿ ಗ್ರಾಮದಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಬೆಳಗಾವಿ ನಗರ ಪೊಲೀಸರು, ಸೋನಟ್ಟಿ ಗ್ರಾಮದ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ಕಳ್ಳಬಟ್ಟಿ ಸಾರಾಯಿ ಅಡ್ಡೆ ಮೇಲೆ ಬೆಳ್ಳಂಬೆಳಿಗ್ಗೆ ಭರ್ಜರಿ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ಸಂಗ್ರಹಿಸಿದ್ದ ಅಂದಾಜು 5 ಸಾವಿರ ಲೀಟರ್ ಕಳ್ಳಬಟ್ಟಿ ಸಾರಾಯಿ ಜಪ್ತಿ ಮಾಡಲಾಗಿದೆ.
ಡಿಸಿಪಿ ರೋಹನ್ ಜಗದೀಶ ನೇತೃತ್ವದಲ್ಲಿ 200 ಜನ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಈ ಬೃಹತ್ ಕಾರ್ಯಾಚರಣೆ ನಡೆದಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ ಮನೆಯ ಮೇಲೆ ದಾಳಿ ಮಾಡಲಾಗಿದೆ.
ಪೊಲೀಸರು ದಾಳಿ ನಡೆಸುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ದಾಳಿ ವೇಳೆ 200 ಲೀಟರ್ ಕಳ್ಳಬಟ್ಟಿ ಇರುವ 26 ಬಾರಲ್, 30 ಲೀಟರ್ 17 ಬಾರಲ್ ಕಳ್ಳಬಟ್ಟಿ ಸಾರಾಯಿ ವಶಕ್ಕೆ ಪಡೆಯಲಾಗಿದೆ. ಅಂದಾಜು 12 ಲಕ್ಷ ರೂ. ಮೌಲ್ಯದ ಕಳ್ಳಬಟ್ಟಿ ಸಾರಾಯಿ ಎಂದು ಅಂದಾಜಿಸಲಾಗಿದೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿ ವಿಚಾರಕ್ಕೆ ಪ್ರತಿಕ್ರಯಿಸಿರುವ ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಒಟ್ಟು 5700 ಲೀಟರ್ ಕಳ್ಳಬಟ್ಟಿ ವಶಕ್ಕೆ ಪಡೆದಿದ್ದೆವೆ. ಕೆಲವು ಮನೆಗಳ ಮೇಲೂ ಸಹ ದಾಳಿ ಮಾಡಿ ಕಳ್ಳಬಟ್ಟಿ ವಶಕ್ಕೆ ಪಡೆಯಲಾಗಿದೆ. ಒಂದು ವಾರದ ಹಿಂದೆ ಬಂದ ಮಾಹಿತಿ ಆಧರಿಸಿ ಇಂದು ಕಾರ್ಯಾಚರಣೆ ನಡೆಸಿದ್ದೇವೆ. ಪೊಲೀಸರು ಬಂದ ತಕ್ಷಣ ಎಲ್ಲರೂ ಓಡಿ ಹೋಗಿದ್ದಾರೆ. ಒಬ್ಬ ಆರೋಪಿ ಮಾತ್ರ ಸಿಕ್ಕಿ ಬಿದ್ದಿದ್ದಾನೆ. ಕೆಲವು ದಿನಗಳಿಂದ ಇಲ್ಲಿ ದಂಧೆ ನಡೆಯುತ್ತಿದೆ. ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.