ಹೊಸದಿಗಂತ ವರದಿ, ಹುಬ್ಬಳ್ಳಿ:
ಐದು ವರ್ಷದ ಬಾಲಕಿ ಹತ್ಯೆಗೈದಿದ್ದ ಬಿಹಾರ ಮೂಲದ ರಿತೇಶ ಕುಮಾರ ಮೇಲೆ ಪೊಲೀಸರು ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶಾಮ್ ಭಟ್ ಅವರು ನಗರಕ್ಕೆ ಭೇಟಿ ನೀಡಿ ಪೊಲೀಸರಿಂದ ಮಾಹಿತಿ ಪಡೆದರು.
ಇಲ್ಲಿಯ ತಾರಿಹಾಳ ಹತ್ತಿರ ರಿತೇಶ ಕುಮಾರ್ ಗುಂಡಿಗೆ ಬಲಿಯಾದ ಸ್ಥಳಕ್ಕೆ ಹಾಗೂ ಐದು ವರ್ಷದ ಬಾಲಕಿ ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಬಾಲಕಿ ಕುಟುಂಬಸ್ಥರ ಭೇಟಿ ನೀಡಿ ಸಾಂತ್ವಾನ ಹೇಳಿದರು.
ಬಳಿಕ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶಾಮ್ ಭಟ್ ಅವರು, ಐದು ವರ್ಷದ ಬಾಲಕಿ ಹತ್ಯೆ ಮಾಡಿದ್ದ ಬಿಹಾರ ಮೂಲದ ರಿತೇಶಕುಮಾರ್ ಮೇಲೆ ಪೊಲೀಸ್ ಗುಂಡು ಹಾರಿಸದ ಪ್ರಕರಣಕ್ಕೆ ಸಂಬಂಧಿಸಿ ಮಾನವ ಹಕ್ಕುಗಳ ಆಯೋಗ ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಿದೆ ಎಂದರು.
ಪೊಲೀಸ್ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಹು-ಧಾ ಪೊಲೀಸ್ ಆಯುಕ್ತರು ವರದಿ ನೀಡಿದ್ದಾರೆ. ಈಗ ನಾವು ಪ್ರಕರಣ ದಾಖಲಿಸಿದ್ದೇವೆ. ರಾಜ್ಯ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಎರಡರಲ್ಲಿ ಒಂದು ಮಾತ್ರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಅವಕಾಶವಿದೆ. ಮೊದಲಿಗೆ ಯಾರು ಪ್ರಕರಣ ದಾಖಲಿಸಿಕೊಳ್ಳುವರೋ ಅವರು ತನಿಖೆ ನಡೆಸುತ್ತಾರೆ ಎಂದು ತಿಳಿಸಿದರು.
ಎನ್‌ಕೌಂಟರ್ ಆದ ಸ್ಥಳವನ್ನು ಪ್ರತ್ಯಕ್ಷವಾಗಿ ವಿಕ್ಷೀಸಲಾಗಿದೆ. ಇನ್ನೂ ಹೆಚ್ಚಿನ ತನಿಖೆ ನಡೆಸಬೇಕಿದೆ. ಪ್ರಕರಣ ತನಿಖೆಯನ್ನು ಮಾನವ ಹಕ್ಕುಗಳ ಆಯೋಗದ ಎಡಿಜಿಪಿ ನೇತೃತ್ವದಲ್ಲಿ ಡಿವೈಎಸ್‌ಪಿ ಅವರು ತನಿಖೆ ಕೈಗೊಳ್ಳಲಿದ್ದಾರೆ. ಅಂತಿಮ ವರದಿಯನ್ನು ರಾಜ್ಯಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ಶೀಘ್ರದಲ್ಲಿ ಎನ್‌ಕೌಂಟರ್ ಮಾಡಿದ ಪಿಐಎಸ್ ಅನ್ನಪೂರ್ಣಾ ಆರ್. ಅವರನ್ನು ವಿಚಾರಣೆ ಒಳಪಡಿಸಲಾಗುವುದು. ಸಿಐಡಿಯೂ ಸಹ ಪ್ರತ್ಯೇಕ ತನಿಖೆ ನಡೆಸುತ್ತದೆ. ಅವರಿಂದ ಏನಾದರೂ ಮಾಹಿತಿ ಬೇಕಾದರೆ ಪಡೆದು ಕೊಳ್ಳಲು ಅವಕಾಶವಿದೆ.
ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಗೋಡಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ಜೀವಿಸುವ ಹಕ್ಕು ಇದೆ. ಅದನ್ನು ಮೊಟಕುಗೊಳಿಸುವ ಹಕ್ಕು ಯಾರಿಗೂ ಇರಲ್ಲ. ಆದ್ದರಿಂದ ಮಾನವ ಹಕ್ಕುಗಳ ಆಯೋಗ ಎನ್‌ಕೌಂಟರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತದೆ. ಆದರೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಹೇಳಿದರು.